ಶನಿವಾರಸಂತೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ
admincoorgdaily

ಶನಿವಾರಸಂತೆ:ಶ್ರೀರಾಮ್ ಫೈನಾನ್ಸ್ ಮತ್ತು ಶ್ರೀರಾಮ್ ಸೇವಾ ಸಂಕಲ್ಪ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ ಶನಿವಾರಸಂತೆಯ ಭಾರತಿ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶನಿವಾರಸಂತೆಯ ವೈದ್ಯ ಡಾ. ಪುಟ್ಟರಾಜು ಉದ್ಘಾಟಿಸಿ ಮಾತನಾಡಿ, ಶ್ರೀರಾಮ್ ಸಂಸ್ಥೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಾರ್ವಜನಿಕ ಕ್ಷೇತ್ರಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ. ಸ್ಥಳೀಯ ಭಾರತಿ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷ, ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನ ಅಲಂಕರಿಸಿದ್ದಾರೆ. ಸಂಸ್ಥೆ ಇನ್ನಷ್ಟು ಸಮಾಜಮುಖಿ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಶ್ರೀರಾಮ್ ಫೈನಾನ್ಸ್ನ ಪ್ರೆಸಿಡೆಂಟ್ ಹಾಗೂ ಝೋನಲ್ ಕಲೆಕ್ಷನ್ ಹೆಡ್ ಶರಶ್ಚಂದ್ರ ಭಟ್ ಕುಕ್ಕುಂಜೆ ಮಾತನಾಡಿ, ನಮ್ಮ ಸಂಸ್ಥೆ ಚಾಲಕರು ಕೇವಲ ಚಾಲಕರಾಗಿ ಉಳಿಯದೇ ಮಾಲೀಕರಾಗಬೇಕು ಎಂಬ ಯೋಚನೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇಂದು ಲಕ್ಷಾಂತರ ಮಂದಿ ಚಾಲಕರು ವಾಹನ ಮಾಲೀಕರಾಗಿದ್ದಾರೆ. ಜೊತೆಗೆ ಸಾವಿರಾರು ಮಂದಿ ಗ್ರಾಮೀಣ ಭಾಗದ ವಿದ್ಯಾವಂತರಿಗೆ ಉದ್ಯೋಗ ನೀಡಿದೆ. ಮಕ್ಕಳು ವಿದ್ಯಾವಂತರಾಗಬೇಕು ಎಂಬ ನಿಟ್ಟಿನಲ್ಲಿ ಕಳೆದ 4-5 ವರ್ಷಗಳಿಂದ ಸುಮಾರು 75 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ. ಜೊತೆಗೆ ಶಾಲೆಗಳನ್ನು ತೆರೆದಿದ್ದೇವೆ ಎಂದು ತಿಳಿಸಿದರು.
ಬಡ ಜನತೆ ಹಣಕಾಸು ಸಾಲ ಸೌಲಭ್ಯ ಪಡೆಯಲು ಎದುರಿಸುತ್ತಿದ್ದ ಸಮಸ್ಯೆಯನ್ನು ಮನಗಂಡು ಶ್ರೀರಾಮ್ ಫೈನಾನ್ಸ್ ಸ್ಥಾಪಿಸಿ, ಸುಲಭ ರೀತಿಯಲ್ಲಿ ಸಾಲ ಸೌಲಭ್ಯ ನೀಡಲಾಯಿತು. ಇದರಿಂದ ಇಂದು ಅನೇಕರು ಬೆಳೆಯುತ್ತಿದ್ದಾರೆ. ಇನ್ನಷ್ಟು ಸಮಾಜಮುಖಿ ಸೇವೆ ಮಾಡುವ ಯೋಜನೆ ನಮ್ಮ ಸಂಸ್ಥೆ ಹೊಂದಿದೆ ಎಂದರು.
ವೇದಿಕೆಯಲ್ಲಿ ಭಾರತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಜಗನ್ ಪಾಲ್ ಮಾತನಾಡಿ, ಶ್ರೀರಾಮ್ ಫೈನಾನ್ಸ್ ಶ್ರೀರಾಮ್ ಸೇವಾ ಸಂಕಲ್ಪ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ. ಇಂದು ಕೆಲವು ಹಣಕಾಸು ಸಂಸ್ಥೆಗಳು ಹಣ ಮಾಡುವುದೊಂದೇ ಗುರಿಯಾಗಿಟ್ಟುಕೊಂಡಿರುವಾಗ, ಈ ರೀತಿಯ ಸೇವೆ ಸಲ್ಲಿಸುತ್ತಿರುವುದರಿಂದ ಅನೇಕ ಮಕ್ಕಳ ಬಾಳಲ್ಲಿ ಬೆಳಕು ಮೂಡುತ್ತಿದೆ ಎಂದರು.
ಭಾರತಿ ಕಾಲೇಜು ಪ್ರಾಂಶುಪಾಲ ಅಶೋಕ್ ಮಾತನಾಡಿ, ಒಂದು ಖಾಸಗಿ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಭಾರತಿ ವಿದ್ಯಾ ಸಂಸ್ಥೆ ಉಪಾಧ್ಯಕ್ಷ ಮಹಮ್ಮದ್ ಪಾಷಾ, ಝೋನಲ್ ಕಲೆಕ್ಷನ್ ಹೆಡ್ ಅರವಿಂದ್, ರೀಜಿನಲ್ ಬಿಸಿನೆಸ್ ಹೆಡ್ ಚೇತನ್, ರೀಜಿನಲ್ ಕಲೆಕ್ಷನ್ ಹೆಡ್ ಎಂ.ಜೆ. ಪ್ರಖ್ಯಾತ್, ಶನಿವಾರಸಂತೆ ಶಾಖಾ ವ್ಯವಸ್ಥಾಪಕ ರಂಜಿತ್, ಕಲೆಕ್ಷನ್ ವ್ಯವಸ್ಥಾಪಕ ಎಸ್.ಯು. ಅಜಿತ್, ಸೋಮವಾರಪೇಟೆ ಶಾಖಾ ವ್ಯವಸ್ಥಾಪಕ ಮಂಜುನಾಥ್, ವಾಹನ ಚಾಲಕರ ಹಾಗೂ ಮೋಟಾರ್ ಕೆಲಸಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕಿ ಕೋಮಲಾ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ ಡಾ. ಪುಟ್ಟರಾಜು, ಜಗನ್ ಪಾಲ್, ಮಹಮ್ಮದ್ ಪಾಷಾ, ಅಶೋಕ್, ಬಾಲಕೃಷ್ಣ ಪೂಜಾರಿ ಹಾಗೂ ಕಳೆದ ಅನೇಕ ವರ್ಷಗಳಿಂದ ಸಂಸ್ಥೆಯೊಂದಿಗೆ ಅತ್ಯುತ್ತಮ ರೀತಿಯಲ್ಲಿ ವ್ಯವಹಾರ ಇಟ್ಟುಕೊಂಡ ಸದಸ್ಯರನ್ನು ಶ್ರೀರಾಮ್ ಫೈನಾನ್ಸ್ ವತಿಯಿಂದ ಸನ್ಮಾನಿಸಲಾಯಿತು.