Kodagu

ಗರ್ಭಿಣಿಗೆ ಬಸ್ಸಿನಲ್ಲೇ ಪ್ರಸವ ವೇದನೆ: ಸಕಾಲಕ್ಕೆ ಸ್ಪಂದಿಸಿ ಆಸ್ಪತ್ರೆಗೆ ದಾಖಲಿಸಿದ ಬಸ್ ಸಿಬ್ಬಂದಿಗೆ ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘ ವಿರಾಜಪೇಟೆ ವತಿಯಿಂದ ಸನ್ಮಾನ

admincoorgdaily

ಗರ್ಭಿಣಿಗೆ ಬಸ್ಸಿನಲ್ಲೇ ಪ್ರಸವ ವೇದನೆ: ಸಕಾಲಕ್ಕೆ ಸ್ಪಂದಿಸಿ ಆಸ್ಪತ್ರೆಗೆ ದಾಖಲಿಸಿದ ಬಸ್ ಸಿಬ್ಬಂದಿಗೆ ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘ ವಿರಾಜಪೇಟೆ ವತಿಯಿಂದ ಸನ್ಮಾನ
ವಿರಾಜಪೇಟೆ: ಪ್ರಸವ ವೇದನೆಯಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಯನ್ನು ಸಕಾಲದಲ್ಲಿ ಸರಕಾರಿ ಆಸ್ಪತ್ರೆಗೆ ತಲುಪಿಸಿ, ಮಗುವಿನ ಜನನಕ್ಕೆ ನೆರವಾಗಿ ಮಾನವೀಯತೆ ಮೆರೆದ 'ರಾಣಿ' ಖಾಸಗಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರನ್ನು ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಹಾಗೂ ಮಾಲೀಕರ ಸಂಘ ವಿರಾಜಪೇಟೆ ವತಿಯಿಂದ ಸಂಘದ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಳೆದ ಮೂರು ದಿನಗಳ ಹಿಂದೆ ಮಡಿಕೇರಿಯಿಂದ ಗೋಣಿಕೊಪ್ಪಕ್ಕೆ ತೆರಳುತ್ತಿದ್ದ 'ರಾಣಿ' ಖಾಸಗಿ ಬಸ್ಸನ್ನು ಅಸ್ಸಾಂ ಮೂಲದ ಗರ್ಭಿಣಿ ಕಾರ್ಮಿಕ ಮಹಿಳೆಯೊಬ್ಬರು ಮಡಿಕೇರಿ ಟೋಲ್‌ಗೇಟ್‌ನಲ್ಲಿ ಹತ್ತಿದ್ದರು. ವಿರಾಜಪೇಟೆ ಮಾರ್ಗವಾಗಿ ಬಸ್ಸು ಚಲಿಸುತ್ತಿದ್ದಾಗ ಆಕೆಗೆ ದಿಢೀರನೆ ತೀವ್ರ ಪ್ರಸವ ವೇದನೆ ಕಾಣಿಸಿಕೊಂಡಿದೆ.
ರಸ್ತೆಯಲ್ಲಿ ಬಸ್ಸು ಸಾಗುತ್ತಿದ್ದ ಸಮಯದಲ್ಲೇ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ರಾಕೇಶ್ ಹಾಗೂ ನಿರ್ವಾಹಕ ಕಿಶನ್ ತಕ್ಷಣವೇ ಆಕೆಗೆ ಬಸ್ಸಿನಲ್ಲಿ ಕೂರಲು ಸೂಕ್ತ ವ್ಯವಸ್ಥೆ ಮಾಡಿ ನೆರವಾದರು. ಬಳಿಕ ಸಮಯಪ್ರಜ್ಞೆ ಮೆರೆದು, ತಾವು ಚಲಾಯಿಸುತ್ತಿದ್ದ ಬಸ್ಸನ್ನು ನೇರವಾಗಿ ವಿರಾಜಪೇಟೆಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗಕ್ಕೆ ತೆಗೆದುಕೊಂಡು ಹೋಗಿ ಆಕೆಯನ್ನು ದಾಖಲಿಸಿದರು.
ಆಸ್ಪತ್ರೆಗೆ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಮಹಿಳೆಗೆ ಯಶಸ್ವಿ ಹೆರಿಗೆಯಾಗಿದ್ದು, ಸುಂದರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಸ್ತುತ ತಾಯಿ ಮತ್ತು ಮಗು ಕ್ಷೇಮವಾಗಿದ್ದಾರೆ.

ಸೇವಾ ಮನೋಭಾವನೆಗೆ ಗೌರವ:

ಬಸ್ ಸಿಬ್ಬಂದಿಯ ಈ ಅಪಾರ ಸಾಮಾಜಿಕ ಬದ್ಧತೆ, ಸೇವಾ ಮನೋಭಾವನೆ ಹಾಗೂ ಮಾನವೀಯ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಮತ್ತು ಮಾಲೀಕರ ಸಂಘವು ಚಾಲಕ ರಾಕೇಶ್ ಹಾಗೂ ನಿರ್ವಾಹಕ ಕಿಶಾನ್ ಅವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿದೆ.

ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಜೂಡಿ ವಾಜ್, "ಚಾಲಕ ರಾಕೇಶ್ ಮತ್ತು ನಿರ್ವಾಹಕ ಕಿಶಾನ್ ಅವರ ಈ ಸಮಯಪ್ರಜ್ಞೆ ಮತ್ತು ಮಾನವೀಯ ಕಾಳಜಿ ನಿಜಕ್ಕೂ ಶ್ಲಾಘನೀಯ. ಪ್ರಯಾಣಿಕರ ಸುರಕ್ಷತೆಯ ಜೊತೆಗೆ ಇಂತಹ ತುರ್ತು ಸಂದರ್ಭದಲ್ಲಿ ತೋರಿಸಿದ ಸ್ಪಂದನೆ ನಮ್ಮ ಇಡೀ ಸಂಘಕ್ಕೆ ಹೆಮ್ಮೆ ತಂದಿದೆ," ಎಂದರು.

ಇದೇ ವೇಳೆ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯರ್ ಮಾತನಾಡಿ, "ಬಸ್ ಸಿಬ್ಬಂದಿ ಕೇವಲ ತಮ್ಮ ಕರ್ತವ್ಯಕ್ಕಷ್ಟೇ ಸೀಮಿತವಾಗದೆ, ಸಮಾಜಕ್ಕೆ ಮಾದರಿಯಾಗುವಂತೆ ನಡೆದುಕೊಂಡಿದ್ದಾರೆ. ಅವರ ಈ ಸೇವಾ ಮನೋಭಾವನೆಯನ್ನು ಗುರುತಿಸಿ ಗೌರವಿಸುವುದು ನಮ್ಮ ಸಂಘದ ಕರ್ತವ್ಯ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಮಹೇಶ್ ಮತ್ತು ಅಜಯ್ ಹಾಗೂ ಕೋಶಾಧಿಕಾರಿ ವಿನಂತು ಉಪಸ್ಥಿತರಿದ್ದರು.