State News

ಜಿಲ್ಲಾ-ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ: ಚುನಾವಣಾಧಿಕಾರಿಗಳ ನೇಮಕಕ್ಕೆ ಆಯೋಗ ಸೂಚನೆ

admincoorgdaily

ಜಿಲ್ಲಾ-ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ: ಚುನಾವಣಾಧಿಕಾರಿಗಳ ನೇಮಕಕ್ಕೆ ಆಯೋಗ ಸೂಚನೆ
(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಬೆಂಗಳೂರು: ಜಿಲ್ಲಾ ಮತ್ತು ಪಂಚಾಯಿತಿ ಚುನಾವಣೆಗೆ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡುವ ಕುರಿತು ರಾಜ್ಯ ಚುನಾವಣಾ ಆಯೋಗವು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.

ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪಿ.ಎಸ್. ಮರಬಳ್ಳಿ ಅವರು ದಿನಾಂಕ 07.11.2026 ರಂದು ಹೊರಡಿಸಿರುವ ಪತ್ರದಲ್ಲಿ ಸೂಚನೆ ನೀಡಿದ್ದಾರೆ.
ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ ನಿಯಮ 6 ರನ್ವಯ ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಗಳನ್ನು ನೇಮಕ ಮಾಡಬೇಕಾಗಿದೆ.

ಜಿಲ್ಲಾ ಪಂಚಾಯಿತಿ ನೇಮಕಾತಿ ವಿಧಾನ;

ಒಂದು ತಾಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲಾ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಒಬ್ಬ ಉಪ ವಿಭಾಗಾಧಿಕಾರಿ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯೊಬ್ಬರನ್ನು ಗುರುತಿಸಿ ಚುನಾವಣಾಧಿಕಾರಿಯಾಗಿ ನೇಮಕ ಮಾಡಬೇಕಾಗಿದೆ. ಒಂದು ವೇಳೆ ಒಂದು ತಾಲೂಕಿನಲ್ಲಿ 10 ಕ್ಕಿಂತ ಹೆಚ್ಚಿನ ಕ್ಷೇತ್ರಗಳಿದ್ದಲ್ಲಿ ಇಬ್ಬರು ಚುನಾವಣಾಧಿಕಾರಿಗಳನ್ನು ನೇಮಕ ಮಾಡಬೇಕಾಗಿ ಸೂಚನೆ ನೀಡಲಾಗಿದೆ.

ಪ್ರತಿಯೊಬ್ಬ ಚುನಾವಣಾಧಿಕಾರಿಗೆ ಸಹಾಯಕರಾಗಿ ತಹಸೀಲ್ದಾರ್ ಹುದ್ದೆಗೆ ತತ್ಸಮಾನ ಹುದ್ದೆಯ (ತಾಲೂಕು ತಹಸೀಲ್ದಾರರನ್ನು ಹೊರತುಪಡಿಸಿ) ಅಧಿಕಾರಿಯೊಬ್ಬರನ್ನು ಸಹಾಯಕ ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಬೇಕು.

ಜಿಲ್ಲಾಧಿಕಾರಿಯವರು ನೇಮಕ ಮಾಡಿದ ಪ್ರತಿಯೊಬ್ಬ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ಯಾವ ಚುನಾವಣಾ ಕ್ಷೇತ್ರ ಅಥವಾ ಕ್ಷೇತ್ರಗಳಿಗೆ ನೇಮಕ ಮಾಡಲಾಗಿದೆ ಹಾಗೂ ಗೊತ್ತುಪಡಿಸಲಾಗಿದೆ ಎಂಬುದನ್ನು ನಿರ್ದಿಷ್ಟಪಡಿಸಬೇಕಾಗಿ ಆಯೋಗ ತಿಳಿಸಿದೆ.

ತಾಲೂಕು ಪಂಚಾಯಿತಿ ನೇಮಕಾತಿ ವಿಧಾನ;

ತಾಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ ಸರಾಸರಿ 15 ಕ್ಷೇತ್ರಗಳಿಗೆ ಒಬ್ಬರಂತೆ ತಾಲೂಕು ತಹಸೀಲ್ದಾರರನ್ನು ಮತ್ತು ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಗುರುತಿಸಿ ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಬೇಕಾಗಿದೆ. ಪ್ರತಿಯೊಬ್ಬ ಚುನಾವಣಾಧಿಕಾರಿಗೆ ಸಹಾಯಕರಾಗಿ ಒಬ್ಬ ಉಪ ತಹಸೀಲ್ದಾರ್ ಮತ್ತು ತತ್ಸಮಾನ ಹುದ್ದೆಯ ಅಧಿಕಾರಿಗಳನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಬೇಕಾಗಿ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.


ನ.16ರೊಳಗೆ ಪ್ರಸ್ತಾವನೆ ಕಡ್ಡಾಯ;

ಆದಷ್ಟು ಬೇಗನೆ ಚುನಾವಣೆ ನಡೆಸಬೇಕಾಗಿರುವುದರಿಂದ ವಿಳಂಬಕ್ಕೆ ಆಸ್ಪದ ನೀಡದೆ ಆಯೋಗದ ಸೂಚನೆಗಳಂತೆ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳ ನೇಮಕಾತಿ ಪಟ್ಟಿಯ ಪ್ರಸ್ತಾವನೆಯನ್ನು ಆಯೋಗದ ಅನುಮೋದನೆಗಾಗಿ ದಿನಾಂಕ 16.11.2026 ರೊಳಗೆ ತಪ್ಪದೇ ನಮೂನೆಗಳಲ್ಲಿ ಜಿಲ್ಲಾಧಿಕಾರಿಗಳು ಸಲ್ಲಿಸಬೇಕಾಗಿದೆ.
ಆಯೋಗದಿಂದ ಅನುಮೋದಿಸಲ್ಪಟ್ಟ ಅಧಿಕಾರಿಗಳನ್ನು ಆಯೋಗದ ಪೂರ್ವಾನುಮತಿ ಇಲ್ಲದೆ ಬದಲಾಯಿಸಲು ಅವಕಾಶ ಇಲ್ಲ.
ಆಯೋಗದ ಅನುಮೋದನೆಯ ನಂತರ ನೇಮಕಾತಿ ಆದೇಶವನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿ ಪ್ರತಿಯನ್ನು ಆಯೋಗಕ್ಕೆ ಕಳುಹಿಸಿಕೊಡುವಂತೆ ಪ್ರಕಟಣೆಯಲ್ಲಿ ‌ ಸೂಚಿಸಲಾಗಿದೆ.