ಚೆಯ್ಯಂಡಾಣೆಯಲ್ಲಿ ಕನ್ನಡ ರಾಜ್ಯೋತ್ಸವ ಕ್ರೀಡಾಕೂಟಕ್ಕೆ ಸಿದ್ಧತೆ;ಕ್ರೀಡಾಕೂಟ ಸಮಿತಿ ಅಧ್ಯಕ್ಷರಾಗಿ ಚೇನಂಡ ಸಂಪತ್ ಆಯ್ಕೆ
admincoorgdaily

ನಾಪೋಕ್ಲು :ಕನ್ನಡ ರಾಜ್ಯೋತ್ಸವದ ಅಂಗವಾಗಿ ಚೆಯ್ಯಂಡಾಣೆಯಲ್ಲಿ ಈ ಬಾರಿ ಅದ್ದೂರಿ ಕ್ರೀಡಾಕೂಟ ಆಯೋಜಿಸಲು ನಿರ್ಧರಿಸಲಾಗಿದ್ದು, ನವೆಂಬರ್ 2 ರಂದು ಹಾಗೂ ನ.6ರಿಂದ 8ರ ವರೆಗೆ ಚೆಯ್ಯಂಡಾಣೆ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದೆ.
ಕ್ರೀಡಾಕೂಟದ ಆಯೋಜನೆಗೆ ಸಂಬಂಧಿಸಿದಂತೆ ನೂತನ ಸಮಿತಿ ರಚಿಸಲಾಗಿದ್ದು,ಅಧ್ಯಕ್ಷರಾಗಿ ಚೇನಂಡ ಸಂಪತ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚೆಯ್ಯಂಡ ನಂದ ನಾಚಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಕುಟ್ಟನ ಸುನಿಲ್,ಕೋಶಾಧಿಕಾರಿಯಾಗಿ ಬಿದ್ದಂಡ ಚೀಯಣ್ಣ (ನಮು) ಹಾಗೂ ಸಂಚಾಲಕರಾಗಿ ಬೆಳಿಯಂಡ್ರ ಹರಿಪ್ರಸಾದ್ ಆಯ್ಕೆಯಾಗಿದ್ದಾರೆ.
ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ವಿವಿಧ ಉಪಸಮಿತಿಗಳ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಗಿದೆ.
ನರಿಯಂದಡ, ಕೋಕೇರಿ ಹಾಗೂ ಚೇಲಾವರ ಗ್ರಾಮಗಳ ಗ್ರಾಮಸ್ಥರನ್ನು ಒಗ್ಗೂಡಿಸಿ, ಎಲ್ಲರ ಸಹಕಾರದೊಂದಿಗೆ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವ ಉದ್ದೇಶವನ್ನು ಸಮಿತಿ ಹೊಂದಿದೆ. ಕಳೆದ ವರ್ಷಗಳಿಗಿಂತ ವಿಭಿನ್ನವಾಗಿ ಈ ಬಾರಿ ಕ್ರೀಡಾಕೂಟವನ್ನು ಇನ್ನಷ್ಟು ಅದ್ದೂರಿಯಾಗಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ.
ಕ್ರೀಡಾಕೂಟದ ಮೂಲಕ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ, ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸುವುದು ಹಾಗೂ ಗ್ರಾಮಸ್ಥರ ನಡುವೆ ಒಗ್ಗಟ್ಟು ಮತ್ತು ಸೌಹಾರ್ದವನ್ನು ಬಲಪಡಿಸುವ ಆಶಯವನ್ನು ಆಯೋಜಕರು ಹೊಂದಿದ್ದಾರೆ.
ಈ ನಿಟ್ಟಿನಲ್ಲಿ ಗ್ರಾಮಸ್ಥರು, ಯುವಜನರು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಿ, ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸುವಂತೆ ಸಮಿತಿ ಮನವಿ ಮಾಡಿದೆ.
ವರದಿ :ಝಕರಿಯ ನಾಪೋಕ್ಲು