Kodagu

ವಿರಾಜಪೇಟೆಯಲ್ಲಿ 18ನೇ ವರ್ಷದ ಓಣಂ ಆಚರಣೆಗೆ ಭರದ ಸಿದ್ಧತೆ

admincoorgdaily

ವಿರಾಜಪೇಟೆಯಲ್ಲಿ 18ನೇ ವರ್ಷದ ಓಣಂ ಆಚರಣೆಗೆ ಭರದ ಸಿದ್ಧತೆ
ವಿರಾಜಪೇಟೆ: ವಿರಾಜಪೇಟೆಯ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಆಯೋಜಿಸಲಾಗಿರುವ 18ನೇ ವರ್ಷದ ಓಣಂ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಮುತ್ತಪ್ಪ ದೇವಾಲಯದಲ್ಲಿ ಸಂಜೆ 'ಪೈಂಗುತ್ತಿ' ಮಡಗುವುದರ ಮೂಲಕ ಆಚರಣೆಗೆ ಅಧಿಕೃತ ಚಾಲನೆ ನೀಡಲಾಯಿತು.

ಸೆಪ್ಟೆಂಬರ್ 6ರ ಭಾನುವಾರ ನಡೆಯಲಿರುವ ಓಣಂ ಆಚರಣೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 8.30ಕ್ಕೆ ಮಹಾಬಲಿಯನ್ನು ಬರಮಾಡಿಕೊಂಡು, ದೀಪ ಬೆಳಗಿಸುವ ಮೂಲಕ ಪ್ರಮುಖ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.

   ಬೆಳಿಗ್ಗೆ 9.30ಕ್ಕೆ ಶ್ರೀ ಚೈತನ್ಯ ಮಠದ ಮುತ್ತಪ್ಪ ದೇವಸ್ಥಾನದಿಂದ ಮಹಾಬಲಿಯ ವೈಭವದ ಮೆರವಣಿಗೆ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾ ಹಾಗೂ ಸಾಂಸ್ಕೃತಿಕ ತಂಡಗಳು ಪಾಲ್ಗೊಳ್ಳಲಿದ್ದು, ಓಣಂ ಹಬ್ಬದ ಸಡಗರಕ್ಕೆ ಮತ್ತಷ್ಟು ಮೆರುಗು ನೀಡಲಿವೆ.

   ಮಧ್ಯಾಹ್ನ 12 ಗಂಟೆಗೆ ಆಗಮಿಸುವ ಸರ್ವ ಭಕ್ತಾದಿಗಳಿಗೆ ಸಾಂಪ್ರದಾಯಿಕ 'ಓಣಂ ಸದ್ಯ' (ವಿಶೇಷ ಭೋಜನ) ವ್ಯವಸ್ಥೆ ಮಾಡಲಾಗಿದೆ. ಕೇರಳದ ಸಾಂಸ್ಕೃತಿಕ ಪರಂಪರೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಓಣಂ ಹಬ್ಬವನ್ನು ವಿರಾಜಪೇಟೆಯಲ್ಲಿ ಪ್ರತಿವರ್ಷ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಬಾರಿಯೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮಾಜದ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರಮಿಸುತ್ತಿದ್ದಾರೆ.

  ಸಮಾಜದ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಓಣಂ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ. 
ಮೆರವಣಿಗೆ ಸಂದರ್ಭ ಶ್ರೀ ಕೃಷ್ಣನ ವೇಶಧಾರಿಗಳು ಗಮನ ಸೆಳೆಯಲಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ಮಕ್ಕಳ ಕೃಷ್ಣ ವೇ಼ಷ ಪ್ರದರ್ಶನವೂ ಇರಲಿದೆ. 
ಈ ಸಂದರ್ಭ ವಿರಾಜಪೇಟೆಯ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್, ಕಾರ್ಯದರ್ಶೀ ಸಿ.ಆರ್. ಬಾಬು, ಸೇರಿದಂತೆ ಇತರರು ಇದ್ದರು.