Kodagu

ಸಮುದಾಯದ ಸಂಸ್ಕೃತಿ, ಆಚಾರ ವಿಚಾರ,ಪರಂಪರೆಯನ್ನು ಪರಿಪಾಲಿಸಿ ಮುಂದಿನ ತಲೆಮಾರಿಗೆ ಪರಿಚಯಿಸಿ: ಬಿಲ್ಲರಿ ಕುಟ್ಟಡ ಪ್ರಭು ಕುಟ್ಟಪ್ಪ.

admincoorgdaily

ಸಮುದಾಯದ ಸಂಸ್ಕೃತಿ, ಆಚಾರ ವಿಚಾರ,ಪರಂಪರೆಯನ್ನು ಪರಿಪಾಲಿಸಿ ಮುಂದಿನ ತಲೆಮಾರಿಗೆ ಪರಿಚಯಿಸಿ: ಬಿಲ್ಲರಿ ಕುಟ್ಟಡ ಪ್ರಭು ಕುಟ್ಟಪ್ಪ.
ವಿರಾಜಪೇಟೆ:ಕೊಡಗಿನ ಕೆಂಬಟ್ಟಿ ಸಮುದಾಯವು ತನ್ನದೇ ಆದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಹೊಂದಿದ್ದು ಸಮುದಾಯದ ಸಂಸ್ಕೃತಿ ಆಚಾರ ವಿಚಾರ ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಅಗತ್ಯವಿದೆ ಎಂದು ಅಖಿಲ ಕೊಡಗು ಕೆಂಬಟ್ಟಿ ಸಮಾಜದ ಅಧ್ಯಕ್ಷ ರಾದ ಬಿಲ್ಲರಿಕುಟ್ಟಡ ಪ್ರಭು ಕುಟ್ಟಪ್ಪ ಅವರು ಹೇಳಿದರು. ಅವರು ವಿರಾಜಪೇಟೆಯ ಡಾ .ಅಂಬೇಡ್ಕರ್ ಭವನದಲ್ಲಿ ನ್ಯೂಸ್ 3 ಡಿಜಿಟಲ್ ಮೀಡಿಯಾ ವತಿಯಿಂದ ಕೆಂಬಟ್ಟಿ ಸಮುದಾಯದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ವಿಜೇತರಿಗೆ ಬಹುಮಾನ ವಿತರಣೆ, ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಸನ್ಮಾನ ಸಮಾರಂಭ ದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೆಂಬಟ್ಟಿ ಸಮುದಾಯವು ಸಮುದಾಯ ಅತ್ಯಂತ ಪ್ರಾಚೀನ ಸಮುದಾಯವಾಗಿದ್ದು ಕೊಡಗು ಜಿಲ್ಲೆಯಲ್ಲಿ ಮಾತ್ರ ಇರುವಂತಹ ಸಮುದಾಯವಾಗಿದೆ. ಮಾತ್ರವಲ್ಲದೆ ಮೂಲ ಜನಾಂಗವಾಗಿದ್ದು ಇತರ ಜನಾಂಗದ ಮಧ್ಯೆ ಚೆನ್ನಾಗಿ ಜೀವನವನ್ನು ನಡೆಸುತ್ತಿದ್ದೇವೆ. ಜನಾಂಗದವರು ಉತ್ತಮ ಶಿಕ್ಷಣ ವನ್ನು ಪಡೆದು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದರು. 
ಕೆಂಬಟ್ಟಿ ಜನಾಂಗದವರು ಹೃದಯವಂತರಾಗಿದ್ದು ಸದಾ ಆಚಾರ ವಿಚಾರಗಳನ್ನು ಪರಿಪಾಲಿಸುತ್ತಾ  ಬಂದಿದ್ದಾರೆ ಎಂದು ಹೇಳಿದರು.

 ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ತಹಸಿಲ್ದಾರ್ ಚಟ್ಟಕುಟ್ಟಡ ಪೊನ್ನಪ್ಪ ಮಾತನಾಡಿ, ನ್ಯೂಸ್ 3 ಡಿಜಿಟಲ್ ಮೀಡಿಯದ ಮುಖ್ಯಸ್ಥರಾದ ಶಶಿ ಅಚ್ಚಪ್ಪ ರವರು ಇಂದು ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಮುಂದೆ ಈ ಡಿಜಿಟಲ್ ಮೀಡಿಯವು ರಾಜ್ಯಮಟ್ಟಕ್ಕೆ ವಿಸ್ತರಣೆ ಆಗಲಿ. ಜನಾಂಗದವರಲ್ಲಿ ಒಗ್ಗಟ್ಟನ್ನು ಮೂಡಿಸುವ ಸಲುವಾಗಿ ಮತ್ತು ಎಲ್ಲರೂ ಒಂದೆಡೆ ಸೇರಲು  ಇಂತಹ ಸಮಾರಂಭಗಳು ಅವಶ್ಯಕವಾಗಿದೆ. ಜನಾಂಗದವರು ಮೀಸಲಾತಿಯನ್ನು ಪಡೆದುಕೊಂಡು ಉದ್ಯೋಗದಲ್ಲಿ ಪ್ರಾಶಸ್ತ್ಯವನ್ನು ಪಡೆದುಕೊಳ್ಳಬೇಕಾಗಿದೆ ಎಂದರು. 

ಬೆಂಗಳೂರಿನ ಉದ್ಯಮಿ ಚಿಮ್ಮಿ ಕುಟ್ಟಡ ನಿತೇಶ್ ಅವರು ಮಾತನಾಡಿ ಕೆಂಬಟ್ಟಿ ಜನಾಂಗದಲ್ಲಿ ಸಮಾಜಮುಖಿ ಕಾರ್ಯಕ್ರಮಗಳು ಜರುಗುತ್ತಿರಬೇಕು. ಯುವ ಪೀಳಿಗೆಯು ಅಭಿವೃದ್ಧಿಯನ್ನು ಹೊಂದಬೇಕು. ಸರ್ಕಾರದ ಅನುದಾನವು ಜನಾಂಗದವರಿಗೆ ನೇರವಾಗಿ ತಲುಪಬೇಕು. ನಮ್ಮ ನಡೆ ನಮ್ಮ ಅಸ್ತಿತ್ವದ ಕಡೆ ಎಂಬುದು ಜನಾಂಗದ ಧ್ಯೇಯವಾಗಬೇಕು. ಜನಾಂಗದಲ್ಲಿ ಕುಲ ಶಾಸನ ಅಧ್ಯಯನ ಆಗಬೇಕಾದ ಅಗತ್ಯವಿದೆ. ಸರ್ಕಾರದ ಬಳಿ ಹಕ್ಕನ್ನು ಮಂಡಿಸುವುದರ ಮೂಲಕ ಹಕ್ಕನ್ನು ಪಡೆಯುವಂತಹ ಅನಿವಾರ್ಯತೆ ಇದೆ ಎಂದರು.

 ವೇದಿಕೆಯಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಅತಿಥಿ ಕೂವಳೆಕುಟ್ಟಡ ಗಿರೀಶ್ ಮಾತನಾಡಿ ಜನಾಂಗದವರು ಒಗ್ಗಟ್ಟಾಗಬೇಕು. ರಸಪ್ರಶ್ನೆ ಸ್ಪರ್ಧೆಯು ಇದೀಗ ಆಯೋಜಿಸಿರುವುದು ಮಹತ್ವದ್ದಾಗಿದು ಮುಂದಿನ ದಿನಗಳಲ್ಲಿ ಜನಾಂಗದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದರು. 

ಕೆಂಬಟ್ಟಿ ಪೊಮ್ಮಕ್ಕಡ ಕೂಟದ ಗೌರವ ಅಧ್ಯಕ್ಷೆ ಮೊಟ್ಟಕುಟ್ಟಡ ಬೋಜಮ್ಮ ಮಾತನಾಡಿ ಜನಾಂಗದ ಸಂಘವು ಸದೃಢವಾಗಬೇಕು. ಜಾತಿವಾರು ಪಟ್ಟಿಯಲ್ಲಿ ಜನಾಂಗದ ಹೆಸರು ಬರಬೇಕು. ಸರ್ಕಾರದ ಸೌಲಭ್ಯಗಳು ಜನಾಂಗದವರಿಗೆ ತಲುಪಬೇಕು. ಜನಾಂಗದ ಎಲ್ಲರೂ ಮುಖ್ಯವಾಹಿನಿಗೆ ಬರಬೇಕಾದ ಅಗತ್ಯವಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನ್ಯೂಸ್ 3 ಡಿಜಿಟಲ್ ಮೀಡಿಯದ ಮುಖ್ಯಸ್ಥರಾದ ಚಟ್ಟಕುಟ್ಟಡ ಶಶಿ ಅಚ್ಚಪ್ಪ ಮಾತನಾಡಿ ಮಕ್ಕಳಿಗೆ ಸ್ಪರ್ಧೆ ಹಾಗೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪೋಷಕರು ಪ್ರೋತ್ಸಾಹವನ್ನು ನೀಡಬೇಕು. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಜನಾಂಗದವರು ಗಟ್ಟಿಯಾಗಬೇಕು. ಜನಾಂಗದ ಪರವಾಗಿ ಇರುವಂತಹ ದಾಖಲೆಗಳು ಅತಿ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಜನಾಂಗದ ಬಗ್ಗೆ ಕುಲಶಾಸ್ತ್ರ ಅಧ್ಯಯನವಾಗಬೇಕು. ಕುಲಶಾಸ್ತ್ರ ಅಧ್ಯಯನವನ್ನು ಮಾಡಿದಾಗ ಮಾತ್ರ ಜನಾಂಗದ ಉಳಿವು ಸಾಧ್ಯ. ಆ ನಿಟ್ಟಿನಲ್ಲಿ ಜನಾಂಗದವರು ಒಗ್ಗಟ್ಟಿನ ಮಂತ್ರವನ್ನು ಜಪಿಸುವುದರ ಮೂಲಕ ಸಮುದಾಯದ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿ ಎಂದು ಹೇಳಿದರು. 

ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಮುದಾಯದ ಚವರೆಕುಟ್ಟಡ ಸುಬ್ರಮಣಿ ಅವರು ಈ ಸಂದರ್ಭದಲ್ಲಿ ಮಾತನಾಡಿದರು. ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಬಿಲ್ಲರಿಕುಟ್ಟಡ ನಯನ, ದ್ವಿತೀಯ ಬಹುಮಾನವನ್ನು ಪಡೆದ ಚಿಮ್ಮಿಕುಟ್ಟಡ ಶಿವಾನಿ ಹಾಗೂ ತೃತೀಯ ಬಹುಮಾನವನ್ನು ಪಡೆದ ಬಿಲ್ಲರಿಕುಟ್ಟಡ ಸ್ನೇಹ ಅವರನ್ನು ಅತಿಥಿಗಳು ಸನ್ಮಾನಿಸಿ ಬಹುಮಾನವನ್ನು ನೀಡಿ ಗೌರವಿಸಿದರು.

 ಮುಖ್ಯ ಅತಿಥಿಗಳಾದ ಪೊನ್ನಪ್ಪ ಅವರು ವಿಜೇತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ಬಹುಮಾನವನ್ನು ವೈಯುಕ್ತಿಕವಾಗಿ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

ಕಾರ್ಯಕ್ರಮದ ಆರಂಭದಲ್ಲಿ ವಿರಾಜಪೇಟೆಯ ಭರತನಾಟ್ಯ ಕಲಾವಿದೆ ಲಾವಣ್ಯ ಬೋರ್ಕರ್ ಅವರಿಂದ ಸ್ವಾಗತ ನೃತ್ಯ ಪ್ರದರ್ಶನ ನಡೆಯಿತು. ಬಿದ್ದಣಕುಟ್ಟಡ ರೋಹಿಣಿ ಪುಷ್ಪ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸ್ವಾಗತಿಸಿ ನಿರೂಪಿಸಿದರು. ತದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಕೊಡಗು ಕೆಂಬಟ್ಟಿ ಜನಾಂಗದ ಸಂಘದ ಸದಸ್ಯರುಗಳು,ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.