ರಾಜ್ಯ ಸರಕಾರದಿಂದ ಬೆಲೆ ಏರಿಕೆಯ ಬರೆ : ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರು : ರಾಷ್ಟ್ರಪತಿ ಆಳ್ವಿಕೆಗೆ ಕೊಡಗು ಬಿಜೆಪಿ ಎಸ್ಟಿ ಮೋರ್ಚಾ ಆಗ್ರಹ
admincoorgdaily

ಮಡಿಕೇರಿ : ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ಎಲ್ಲಾ ಅಗತ್ಯ ವಸ್ತುಗಳ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಿರುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವ ಮೂಲಕ ಜನರಿಗೆ ನೆಮ್ಮದಿಯ ಬದುಕನ್ನು ಕಲ್ಪಿಸಿಕೊಡಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎ.ಪರಮೇಶ್ವರ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯ ಸರಕಾರ ಉಚಿತ ಯೋಜನೆಗಳ ಹೆಸರಿನಲ್ಲಿ ಜನಸಾಮಾನ್ಯರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ಕುಟುಂಬಗಳು ಜೀವನ ಸಾಗಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳ ವಿಚಾರದಲ್ಲಿಯೂ ಹಿಂದಿನ ದರಗಳನ್ನು ಮುಂದಿಟ್ಟುಕೊಂಡು ಜನರ ಗಮನವನ್ನು ಬೇರೆಡೆ ಸೆಳೆಯುವ ಮೂಲಕ ಸತ್ಯವನ್ನು ಮರೆಮಾಚಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಬರದ ಪರಿಸ್ಥಿತಿ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಇದರ ತೀವ್ರತೆ ಹೆಚ್ಚಾಗುವ ಆತಂಕವಿದೆ. ಒಂದೆಡೆ ಬೆಳೆ ಹಾನಿ, ಮತ್ತೊಂದೆಡೆ ಮೇವಿನ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಲಿನ ದರವನ್ನು ಈಗಾಗಲೇ ನಾಲ್ಕು ಬಾರಿ ಹೆಚ್ಚಳ ಮಾಡಿದ್ದರೂ ರೈತರಿಗೆ ನಿರೀಕ್ಷಿತ ಲಾಭ ದೊರೆಯುತ್ತಿಲ್ಲ. ಜಾನುವಾರುಗಳ ಮೇವಿಗೆ ಯಾವುದೇ ಸಬ್ಸಿಡಿ ನೀಡದೆ, ಒಂದು ಚೀಲ ಮೇವಿನ ಬೆಲೆಯನ್ನು 200 ರೂ.ಗಿಂತಲೂ ಹೆಚ್ಚಿಸಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ರೈತರ ಹೆಸರಿನಲ್ಲಿ ಸರಕಾರ ರಾಜಕೀಯ ಮಾಡುತ್ತಿದೆಯೇ ಹೊರತು ನೈಜವಾಗಿ ನೆರವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಜಾರಿಗೊಳಿಸುವ ಮೂಲಕ ರಾಜ್ಯ ಸಾರಿಗೆ ಸಂಸ್ಥೆಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹಾಕಲಾಗಿದೆ. ಉಚಿತ ವಿದ್ಯುತ್ ಯೋಜನೆಯಿಂದ ವಿದ್ಯುತ್ ಇಲಾಖೆಯ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಟೀಕಿಸಿದ್ದಾರೆ.
ಮಹಿಳೆಯರಿಗೆ ಮಾಸಿಕ 2,000 ರೂ. ನೀಡುವ ಭರವಸೆ ನೀಡಿದ್ದರೂ 8ರಿಂದ 9 ತಿಂಗಳ ಹಣ ಪಾವತಿಸದೆ ವಂಚಿಸಲಾಗಿದೆ. ಪುರುಷ ಪ್ರಯಾಣಿಕರ ಮೇಲೆ ಬಸ್ ಪ್ರಯಾಣದ ದರ ಏರಿಕೆಯ ಹೊರೆ ಹಾಕಲಾಗುತ್ತಿದೆ. ಪಿಂಚಣಿ ಪಡೆಯುವ ವೃದ್ಧರು ಹಾಗೂ ಅರ್ಹ ಫಲಾನುಭವಿಗಳಿಗೆ ಪರಿಶೀಲನೆಯ ನೆಪದಲ್ಲಿ ನಾಲ್ಕೈದು ತಿಂಗಳ ಪಿಂಚಣಿ ಹಣ ನೀಡದೆ ಅವರ ಜೀವನ ನಿರ್ವಹಣೆಗೆ ತೊಂದರೆ ಉಂಟು ಮಾಡಲಾಗಿದೆ ಎಂದು ದೂರಿದ್ದಾರೆ.
ಪರಿಶಿಷ್ಟ ಪಂಗಡದ ಜನರಿಗೆ ನೀಡಲಾಗುತ್ತಿದ್ದ ಪೌಷ್ಟಿಕ ಆಹಾರದ ಕಿಟ್ಗಳನ್ನು ಕಳೆದ ಎಂಟು ತಿಂಗಳಿಂದ ವಿತರಿಸದೆ ಸರಕಾರ ನಿರ್ಲಕ್ಷ್ಯ ವಹಿಸಿದೆ.
ಕಂದಾಯ ಇಲಾಖೆಯಲ್ಲಿ ಜನರ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಆಧಾರ್ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆನ್ಲೈನ್ ಸೇವೆಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಮೂಲಭೂತ ಸೌಕರ್ಯಗಳ ಕೊರತೆಯೂ ಮುಂದುವರಿದಿದ್ದು, ರಸ್ತೆಗಳ ಅಭಿವೃದ್ಧಿ ಹಾಗೂ ಹೊಸ ಕಾಮಗಾರಿಗಳ ವಿಚಾರದಲ್ಲಿಯೂ ನಿರೀಕ್ಷಿತ ಪ್ರಗತಿ ಕಂಡುಬರುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17 ಬಾರಿ ಬಜೆಟ್ ಮಂಡಿಸಿರುವ ಆರ್ಥಿಕ ತಜ್ಞರೆಂದು ಬಿಂಬಿಸಿಕೊಂಡಿದ್ದರೂ, ಚುನಾವಣಾ ಸಂದರ್ಭದಲ್ಲಿ ಉಚಿತ ಯೋಜನೆಗಳ ಭರವಸೆಗಳನ್ನು ನೀಡಿ ರಾಜ್ಯದ ಆರ್ಥಿಕತೆಯನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಉಚಿತ ಯೋಜನೆಗಳ ಅನುಷ್ಠಾನ ಹಾಗೂ ಆಡಳಿತ ವೈಫಲ್ಯದಿಂದ ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಾಗಬಹುದು ಎಂಬ ಆತಂಕ ಜನರಲ್ಲಿ ಮೂಡಿದೆ ಎಂದು ಎಂ.ಎ.ಪರಮೇಶ್ವರ ಟೀಕಿಸಿದ್ದಾರೆ.
ಜನಸಾಮಾನ್ಯರು ಮೂರು-ನಾಲ್ಕು ದಿನ ಹಾಲು ಖರೀದಿಸದೆ ಪ್ರತಿಭಟಿಸಿದರೆ ಅದರ ಪರಿಣಾಮ ಸರಕಾರಕ್ಕೆ ಅರಿವಾಗಬಹುದು. ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ಕರ್ನಾಟಕವನ್ನು ರಕ್ಷಿಸಲು ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದೇ ಸೂಕ್ತ ಎಂದು ಎಂ.ಎ ಪರಮೇಶ್ವರ ತಿಳಿಸಿದ್ದಾರೆ.