ಕ್ರೀಡಾ ಮೂಲಸೌಕರ್ಯಕ್ಕೆ ಆದ್ಯತೆ: ಕೊಡಗಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸುವ ಗುರಿ : ಶಾಸಕ ಪೊನ್ನಣ್ಣ
admincoorgdaily

ಪೊನ್ನಂಪೇಟೆ: ಕೊಡಗು ಜಿಲ್ಲೆಯ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದು ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಹೇಳಿದರು.
ಪೊನ್ನಂಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊನ್ನಂಪೇಟೆ ಕ್ರೀಡಾ ಕೇಂದ್ರ ನಿರ್ಮಾಣಕ್ಕೆ ರಾಜ್ಯ ಬಜೆಟ್‌ನಲ್ಲಿ ₹30 ಕೋಟಿ ಪ್ರಸ್ತಾವನೆ ಸಿದ್ಧವಾಗಿದ್ದು, ಪ್ರಸಕ್ತ ಸಾಲಿನಲ್ಲಿ ₹10 ಕೋಟಿ ಅನುದಾನ ನೀಡುವ ಭರವಸೆ ದೊರೆತಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಗುದ್ದಲಿಪೂಜೆ ಮುಂದೂಡಿದರೂ ಕಾಮಗಾರಿ ಸ್ಥಗಿತಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿರಾಜಪೇಟೆ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬಾಸ್ಕೆಟ್‌ಬಾಲ್ ಕೋರ್ಟ್ ನಿರ್ಮಾಣ ಪೂರ್ಣಗೊಂಡಿದ್ದು, ಅದನ್ನು ಒಳಾಂಗಣ ಕ್ರೀಡಾಂಗಣವನ್ನಾಗಿ ಅಭಿವೃದ್ಧಿಪಡಿಸಲು ₹1 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಕೊಡಗು ಕ್ರೀಡೆಗೆ ಹೆಸರುವಾಸಿಯಾಗಿದ್ದರೂ ಇತ್ತೀಚೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಕೊರತೆ ಇದೆ. ಮೂಲಸೌಕರ್ಯ ಹಾಗೂ ವೈಜ್ಞಾನಿಕ ತರಬೇತಿಯ ಕೊರತೆಯನ್ನು ನೀಗಿಸಿ ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸುವುದು ತಮ್ಮ ಉದ್ದೇಶ ಎಂದು ಹೇಳಿದರು.
ಪೊನ್ನಂಪೇಟೆ ಕ್ರೀಡಾ ಟರ್ಫ್ ಕಾಮಗಾರಿ ನಡೆಯುತ್ತಿರುವ ಹಾಕಿ ಲೀಗ್‌ಗೆ ಅಡ್ಡಿಯಾಗದಂತೆ ಸೆ.28 ರಿಂದ ಆರಂಭಿಸಿ ಶೀಘ್ರ ಪೂರ್ಣಗೊಳಿಸಲು ಸೂಚಿಸಿದ್ದು, 2027ರ ಹಾಕಿ ಹಬ್ಬವನ್ನು* ಇದೇ ಮೈದಾನದಲ್ಲಿ ಆಯೋಜಿಸುವ ಗುರಿ ಇದೆ. ಮೈದಾನದ ಪಕ್ಕ ಶಾಶ್ವತ ಗ್ಯಾಲರಿ ನಿರ್ಮಾಣದ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ಮಹಿಳಾ ಅಧ್ಯಕ್ಷೆ ಆಶಾ ಪೂಣಚ್ಚ, ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಅಧ್ಯಕ್ಷ ಅಜ್ಜಿಕುಟ್ಟಿರ ನರೇನ್ ಎಸ್.ಕಾರ್ಯಪ್ಪ, ಒಲಿಂಪಿಯನ್ ಬಾಳೆಯಡ ಸುಬ್ರಮಣ್ಯ, ಕುಟುಂಬಸ್ಥರು, ಅಧಿಕಾರಿಗಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.