ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ: ಜಿಲ್ಲಾಧಿಕಾರಿ
admincoorgdaily

ಮಡಿಕೇರಿ:-ಜಿಲ್ಲೆಯ ಪ್ರವಾಸಿ ತಾಣಗಳನ್ನು ಪರಿಸರ ಸ್ನೇಹಿಯಾಗಿ ಮತ್ತಷ್ಟು ಜನಪ್ರಿಯಗೊಳಿಸುವುದು, ಸ್ಥಳೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಹಾಗೂ ಪ್ರವಾಸಿಗರಿಗೆ ಉತ್ತಮ ಅನುಭವ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಮತ್ತು ಸಂಘ, ಸಂಸ್ಥೆಯವರು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಹೋಂಸ್ಟೇ ಅಸೋಸಿಯೇಷನ್, ಚೇಂಬರ್ ಆಫ್ ಕಾಮರ್ಸ್, ಟೂರ್ ಅಂಡ್ ಟ್ರಾವಲ್ಸ್, ರೋಟರಿ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದರು.
ಸಭೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮದ ವೈವಿಧ್ಯತೆ, ಸ್ಥಳೀಯ ಸಂಸ್ಕøತಿ, ಪರಂಪರೆ, ಆಹಾರ, ಕಲೆ ಹಾಗೂ ಪ್ರಕೃತಿ ಸೌಂದರ್ಯವನ್ನು ಪ್ರವಾಸಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಕುರಿತು ಚರ್ಚಿಸಲಾಯಿತು.
ಈ ಸಂದರ್ಭ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಎಚ್.ಶಶಿಧರ್ ಅವರು, ಪ್ರವಾಸೋದ್ಯಮ ದಿನಾಚರಣೆಯ ಪ್ರಯುಕ್ತ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.
ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೊಡಗಿನ ಸಾಂಪ್ರದಾಯಿಕ ಆಹಾರ ಮೇಳ, ಕಾಫಿ, ಜೇನು, ಸಾಂಬಾರ ಪದಾರ್ಥಗಳು ಸೇರಿದಂತೆ ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ.
ಧಾರ್ಮಿಕ ಕೇಂದ್ರಗಳಾದ ತಲಕಾವೇರಿ, ಭಾಗಮಂಡಲ, ಓಂಕಾರೇಶ್ವರ ದೇವಸ್ಥಾನ, ಪ್ರವಾಸಿ ತಾಣಗಳಾದ, ರಾಜಾಸೀಟು, ನಿಸರ್ಗಧಾಮ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹೆರಿಟೇಜ್ ವಾಕ್ (ಪಾರಂಪರಿಕ ನಡಿಗೆ) ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಉಪನಿದೇರ್ಶಕರು ತಿಳಿಸಿದರು.
ಪರಿಸರ ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲು ಪ್ರಮುಖ ಪ್ರವಾಸಿ ತಾಣಗಳಲ್ಲಿ ‘ಸ್ವಚ್ಛ ಕೊಡಗು-ಸುಂದರ ಕೊಡಗು' ಅಭಿಯಾನ, ಶುಚಿತ್ವ ಕಾರ್ಯಕ್ರಮ ಹಾಗೂ ಪ್ಲಾಸ್ಟಿಕ್ ಮುಕ್ತ ಪ್ರತಿಜ್ಞೆ, ಪ್ರವಾಸಿಗರಿಗೆ ಮತ್ತು ಹೋಂಸ್ಟೇ-ರೆಸಾರ್ಟ್ ಮಾಲೀಕರಿಗೆ ಘನತ್ಯಾಜ್ಯ ವಿಲೇವಾರಿ ಮರುಬಳಕೆ ಕುರಿತು ಕಾರ್ಯಾಗಾರ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ಕುರಿತ ಪ್ರಬಂಧ, ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು, ಸಸಿ ನೆಡುವಿಕೆ ಹಾಗೂ ಜಲಮೂಲಗಳ ಸಂರಕ್ಷಣೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಡ್ರಗ್ಸ್ ಫ್ರೀ ಕುರಿತು ಜಾಗೃತಿ ಮೂಡಿಸಲು ವಾಕಥಾನ್, ಮ್ಯಾರಥಾನ್ ಮತ್ತು ಸೈಕಲ್ ಜಾಥಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ ಎಂದರು.
ವಿದ್ಯಾರ್ಥಿಗಳು, ಸ್ಟಾರ್ಟ್ ಅಪ್‍ಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಉದ್ಯಮಿಗಳು ಕೊಡಗಿನ ಸ್ವಚ್ಛ, ಸುರಕ್ಷಿತ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕಾಗಿ ಡಿಜಿಟಲ್ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ನವೀನ ಕಲ್ಪನೆಗಳನ್ನು ಪ್ರಸ್ತುತಪಡಿಸುವ ‘ಡಿಜಿಟಲ್ ಪ್ರವಾಸೋದ್ಯಮ ನವೋದ್ಯಮ ಸ್ಪರ್ಧೆ’ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಶಶಿಧರ್ ಅವರು ತಿಳಿಸಿದರು.
ಪ್ರವಾಸಿ ಮಾರ್ಗದರ್ಶಕರು, ಟ್ಯಾಕ್ಸಿ ಚಾಲಕರು, ಕಲಾವಿದರು ಹಾಗೂ ಸಣ್ಣ ಉದ್ಯಮಿಗಳಿಗೆ ಆನ್‍ಲೈನ್ ಪಟ್ಟಿ, ಡಿಜಿಟಲ್ ಪಾವತಿ, ಸಾಮಾಜಿಕ ಜಾಲತಾಣ ಬಳಕೆ ಮತ್ತು ಮೂಲಭೂತ ಕೃತಕ ಬುದ್ಧಿಮತ್ತೆ ಆಧಾರಿತ ಮಾರ್ಕೆಟಿಂಗ್ ಕುರಿತು ಡಿಜಿಟಲ್ ಕೌಶಲ್ಯ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಯುವಕರಿಗಾಗಿ ಕೊಡಗಿನ ಪ್ರಕೃತಿ, ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳನ್ನು ಜವಾಬ್ದಾರಿಯುತವಾಗಿ ಪರಿಚಯಿಸುವ ಛಾಯಾಚಿತ್ರ, ಕಿರುಚಿತ್ರ ಹಾಗೂ ಪೋಸ್ಟರ್ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ನೈತಿಕ ಕೃತಕ ಬುದ್ಧಿಮತ್ತೆ ಬಳಕೆಯ ಸೃಜನಾತ್ಮಕ ಕೃತಿಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಇದರೊಂದಿಗೆ ಸುಸ್ಥಿರ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮ ಕುರಿತು ಸ್ಥಳೀಯ ಹೋಟೆಲ್, ಹೋಂಸ್ಟೇ, ಟೂರ್ ಆಪರೇಟರ್‍ಗಳೊಂದಿಗೆ ವಿಚಾರ ಸಂಕಿರಣ ಹಾಗೂ ಸಂವಾದ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಸನ್ಮಾನ, ಕೊಡಗಿನ ಪ್ರವಾಸಿ ತಾಣಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಡಿಜಿಟಲ್ ಪ್ರಚಾರ ಕೈಗೊಳ್ಳಲು ಉದ್ದೇಶಿಸಲಾಗಿದೆ. ಸ್ಥಳೀಯ ಶಾಲಾ ಮಕ್ಕಳಿಗೆ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಿಗೆ ಶೈಕ್ಷಣಿಕ ಭೇಟಿ ಏರ್ಪಡಿಸುವ ಮೂಲಕ ಜಿಲ್ಲೆಯ ಪ್ರಕೃತಿ, ಸಂಸ್ಕೃತಿ ಹಾಗೂ ಪ್ರವಾಸೋದ್ಯಮದ ಕುರಿತು ಅರಿವು ಮೂಡಿಸಲು ಸಹ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕೊಡಗು ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷರಾದ ಮೋಂತಿ ಗಣೇಶ್, ಟೂರ್ ಅಂಡ್ ಟ್ರಾವೆಲ್ ಅಸೋಸಿಯೇಷನ್ ವಂಸತ, ಹೋಂಸ್ಟೇ ಅಸೋಸಿಯೇಷನ್‍ನ ಪ್ರಮುಖರಾದ ನವೀನ್ ಅಂಬೆಕಲ್, ರೋಟರಿಯ ಮನೋಹರ್ ಕಾಮತ್, ಹೋಟೆಲ್ ಮತ್ತು ರೆಸಾರ್ಟ್ ಸಂಘದ ಸಲಹೆಗಾರರಾದ ಜಿ.ಚಿದ್ವಿಲಾಸ್, ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರಾದ ಜತೀನ್ ಬೋಪಣ್ಣ, ಇಲಾಖಾ ಸಿಬ್ಬಂದಿಗಳು ಇದ್ದರು.