Kodagu

ವಿರಾಜಪೇಟೆಯಲ್ಲಿ SKSSF ವತಿಯಿಂದ ಪ್ರತಿಭಟನೆ; SIR ರದ್ದಾಗುವವರೆಗೂ ನಿರಂತರ ಹೋರಾಟ;ಶುಹೈಬ್ ಫೈಝಿ

admincoorgdaily

ವಿರಾಜಪೇಟೆಯಲ್ಲಿ SKSSF ವತಿಯಿಂದ ಪ್ರತಿಭಟನೆ; SIR ರದ್ದಾಗುವವರೆಗೂ ನಿರಂತರ ಹೋರಾಟ;ಶುಹೈಬ್ ಫೈಝಿ


ವಿರಾಜಪೇಟೆ: SIR ಅಕ್ರಮ ವಿರುದ್ಧ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ವಿರಾಜಪೇಟೆ SKSSF ವಲಯ ಸಮಿತಿ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದ SKSSF ಕೇಂದ್ರ ಕೌನ್ಸಿಲ್ ಸದಸ್ಯ ಶುಹೈಬ್ ಫೈಝಿ, SIR ಜಾರಿಗೊಳಿಸಿ ದೇಶದಾದ್ಯಂತ ಅರಾಜಕತೆ ಸೃಷ್ಟಿಯಾಗಿದೆ. ಭಾರತದಲ್ಲಿರುವ ಭಾರತೀಯರನ್ನೇ ಮತದಾರರ ಪಟ್ಟಿಯಿಂದ ಹೊರಗಿಡುವ ಕೆಲಸ ನಡೆಯುತ್ತಿದೆ. ಈ ಅವೈಜ್ಞಾನಿಕ SIR ಪ್ರಕ್ರಿಯೆಯನ್ನು ಕೈಬಿಡಬೇಕು. ಅಕ್ರಮದ ಆರೋಪ ಎದುರಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ವಜಾಗೊಳಿಸಬೇಕು ಅಥವಾ ಅವರೇ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಜನರ ಬದುಕಿನಲ್ಲಿ ಚೆಲ್ಲಾಟವಾಡಲು ಹೊರಟ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ ಜನರು ತಿರುಗಿಬಿದ್ದಿದ್ದಾರೆ. ಬಿಹಾರ, ಪಶ್ಚಿಮ ಬಂಗಾಳದಲ್ಲಿ ಅದೆಷ್ಟೋ ಜನರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿ ಅಕ್ರಮವೆಸಗಿದ್ದಾರೆ. ಪಶ್ಚಿಮ ಬಂಗಾಳದ ಇಪ್ಪತ್ತು ಲಕ್ಷ ಜನರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜನರೀಗ ಎಚ್ಚೆತ್ತುಕೊಂಡಿದ್ದಾರೆ. SIR ರದ್ದಾಗುವವರೆಗೆ ಮತ್ತು ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಈ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಎಚ್ಚರಿಸಿದ ಅವರು, ಇದು ಕೇವಲ ಮುಸಲ್ಮಾನರ ಪ್ರತಿಭಟನೆಯಲ್ಲ, SIR ನಿಂದ ಎಲ್ಲಾ ಜಾತಿ ಧರ್ಮದವರೂ ತೊಂದರೆಗೊಳಗಾಗಿದ್ದಾರೆ.ನಮ್ಮ ಪ್ರತಿಭಟನೆ ತೊಂದರೆಗೊಳಗಾದವರ ಪರವಾಗಿ ಇರಲಿದೆ ಎಂದರು.

SKSSF ರಾಜ್ಯ ಸಮಿತಿ ಕೋಶಾಧಿಕಾರಿ ತಮ್ಲೀಕ್ ದಾರಿಮಿ ಮಾತನಾಡಿ ದೇಶದಲ್ಲಿ ಡಿಲೀಟ್ ಆದ ಮತದಾರರ ಸಂಖ್ಯೆ ಮತ್ತು SIR ನಿಂದಾದ ಸಮಸ್ಯೆಗಳ ಬಗ್ಗೆ ವಿವರಿಸಿದರು.

ವಿರಾಜಪೇಟೆ ಪುರಸಭೆ ಮಾಜಿ ಸದಸ್ಯ ಮುಹಮ್ಮದ್ ರಾಫಿ ಪ್ರತಿಭಟನಾ ಕಾರ್ಯಕ್ರಮವನ್ನು ಶ್ಲಾಘಿಸಿ ಭಾಷಣ ಮಾಡಿದರು. ಜಿಲ್ಲಾಧ್ಯಕ್ಷ ರಫೀಕ್ ಬಾಖವಿ ಘೋಷಣಾ ವಾಕ್ಯ ಮೊಳಗಿಸಿದರು.

ವಲಯಾಧ್ಯಕ್ಷ ಅಶ್ರಫ್ ಫೈಝಿ, ರಾಜ್ಯ ಉಪಾಧ್ಯಕ್ಷ ಸಅದ್ ಫೈಝಿ ಚೋಕಂಡಡಳ್ಳಿ, ಜಿಲ್ಲಾ ಕಾರ್ಯದರ್ಶಿ ಕರೀಮ್ ಮುಸ್ಲಿಯಾರ್, ನಿರ್ವಾಹಕ ಕಾರ್ಯದರ್ಶಿ ಅಬ್ದುಲ್ ಹಕೀಮ್ ಹಿಶಾಮಿ, ನೌಶಾದ್ ದಾರಿಮಿ, ಅನೀಫ್ ಫೈಝಿ ಎಡಪಾಲ, ಅನೀಫ್ ಫೈಝಿ ಗುಂಡಿಗರೆ, ಟೌನ್ ಜುಮ್ಮಾ ಮಸೀದಿಯ ಖತೀಬರಾದ ಹಾರಿಸ್ ಬಾಖವಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ವಲಯ ಕಾರ್ಯದರ್ಶಿ ಶರಫುದೀನ್ ಸ್ವಾಗತಿಸಿ, ವಲಯ ಸಹ ಕಾರ್ಯದರ್ಶಿ ಶಿಹಾಬ್ ಕಾರ್ಯಕ್ರಮ ನಿರೂಪಿಸಿದರು.