ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಜನಜಾಗೃತಿ;ಕುಟ್ಟದಿಂದ ಜನಾಂದೋಲನ ರಥಯಾತ್ರೆಗೆ ಚಾಲನೆ
admincoorgdaily

ಪೊನ್ನಂಪೇಟೆ, ಸೆ.29: ದೇಶದ ಅಖಂಡತೆ, ಏಕತೆ ಹಾಗೂ ಆಂತರಿಕ ಸುರಕ್ಷತೆಯ ಹಿನ್ನೆಲೆಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಹಿಂದೂ ಜಾಗರಣ ವೇದಿಕೆ ವತಿಯಿಂದ ಆಯೋಜಿಸಿರುವ ಜನಾಂದೋಲನ ರಥಯಾತ್ರೆ ಸೋಮವಾರ ಕೊಡಗು ಜಿಲ್ಲೆಯ ಗಡಿಯಾದ ಕುಟ್ಟದಿಂದ ಆರಂಭಗೊಂಡಿತು.
‘ರಾಷ್ಟ್ರೀಯ ಸುರಕ್ಷತೆಗಾಗಿ ಜಿಲ್ಲೆಯಾದ್ಯಂತ ಜನಜಾಗೃತಿ’ ಹಾಗೂ ‘ಜಾಗೃತ ಸಮಾಜ–ಸುರಕ್ಷಿತ ಭಾರತ’ ಎಂಬ ಆಶಯದೊಂದಿಗೆ ಸೆ.28ರಿಂದ ಅ.9ರವರೆಗೆ ನಡೆಯಲಿರುವ ರಥಯಾತ್ರೆ ಕುಟ್ಟದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘಚಾಲಕ ಚೆಕ್ಕೇರ ಮನು ಕಾವೇರಪ್ಪ, ತಾಲೂಕು ಸಂಘಚಾಲಕ ಮಾಣಿರ ಬೋಪಣ್ಣ ಹಾಗೂ ಪ್ರಮುಖರು ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಯಾತ್ರೆಯನ್ನು ಉದ್ಘಾಟಿಸಿದರು. ನಂತರ ಶ್ರೀಮಂಗಲ,ಟಿ.ಶೆಟ್ಟಿಗೇರಿ, ಹುದಿಕೇರಿ ಮಾರ್ಗವಾಗಿ ಸಾಗಿ ಪೊನ್ನಂಪೇಟೆಗೆ ಆಗಮಿಸಿತು. ಮಾಪಿಳೆತೋಡಿನಲ್ಲಿ ನೂರಾರು ಕಾರ್ಯಕರ್ತರು ರಥವನ್ನು ಸ್ವಾಗತಿಸಿದರು. ಬಳಿಕ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಸಮಾವೇಶ ನಡೆಯಿತು.
ಈ ಸಂದರ್ಭ ಹಿಂದೂ ಸುರಕ್ಷಾ ಸಮಿತಿಯ ಜಿಲ್ಲಾ ಸಂಚಾಲಕ ಉಡೋತ್ ಚಂದ್ರ ಮಾತನಾಡಿ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಗೆ ಅಕ್ರಮ ಬಾಂಗ್ಲಾದೇಶಿ ವಲಸಿಗರು ಪ್ರವೇಶಿಸುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೊಡಗು, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ತೋಟಗಳಲ್ಲಿ ಹೊರರಾಜ್ಯದ ಕಾರ್ಮಿಕರ ಹೆಸರಿನಲ್ಲಿ ಅಕ್ರಮ ವಲಸಿಗರು ನೆಲೆಸಿರುವ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಬೇಕು. ಕಾರ್ಮಿಕರ ಗುರುತು ಹಾಗೂ ದಾಖಲೆಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಿ, ಅಕ್ರಮವಾಗಿ ನೆಲೆಸಿರುವವರು ಪತ್ತೆಯಾದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಸುರಕ್ಷತೆ ಹಾಗೂ ಸಾಮಾಜಿಕ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಜಾಗರೂಕರಾಗಿರಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸಾರ್ವಜನಿಕರು ಸ್ವಯಂ ಕ್ರಮ ಕೈಗೊಳ್ಳದೆ ಪೊಲೀಸ್ ಇಲಾಖೆ ಅಥವಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಾದ್ಯಂತ 12 ದಿನಗಳ ಕಾಲ ರಥಯಾತ್ರೆ ಸಂಚರಿಸಲಿದ್ದು, ವಿವಿಧ ಪಟ್ಟಣ ಹಾಗೂ ಗ್ರಾಮಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಮಾತನಾಡಿ, ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಗಡಿಯಾದ ಕುಟ್ಟದಿಂದ ಆರಂಭಗೊಂಡಿರುವ ಯಾತ್ರೆ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ಸಂಚರಿಸಲಿದೆ ಎಂದರು.
ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಅಲ್ಲುಮಾಡ ಶರತ್, ಅನಿಲ್ ಪ್ರಸಾದ್, ವಿಹೆಚ್ ಪಿ ಪೊನ್ನಂಪೇಟೆ ಪ್ರಖಂಡ ಅಧ್ಯಕ್ಷ ಉಮೇಶ್,ಬಿಜೆಪಿ ವಿರಾಜಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ಮುದ್ದಿಯಡ ಮಂಜು ಗಣಪತಿ, ಕಬೀರ್ ದಾಸ್, ಕೋಟೆರ ಕಿಶನ್, ಪಂದ್ಯಂಡ ಹರೀಶ್, ಅಮ್ಮತ್ತೀರ ಸುರೇಶ್, ಆಲೇಮಾಡ ನವೀನ್ ,ದೇಯಂಡ ಮಜು ಸೇರಿದಂತೆ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಚಿತ್ರ ಶಿರ್ಷಿಕೆ, 29ppt01 ರಥಯಾತ್ರೆಗೆ ಚಾಲನೆ, 29ppt02 ಪೊನ್ನಂಪೇಟೆಯಲ್ಲಿ ಸಮಾವೇಶ