ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ: 134 ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ
admincoorgdaily

ಪೊನ್ನಂಪೇಟೆ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಧ್ಯಕ್ಷತೆಯಲ್ಲಿ ಶ್ರೀಮಂಗಲದ ಕೃಷ್ಣ ಕನ್ವೆನ್ಷನ್ ಸಭಾಂಗಣದಲ್ಲಿ ಹೋಬಳಿ ಮಟ್ಟದ ಪ್ರಜಾಸೇವೆ ಅಭಿಯಾನ ನಡೆಯಿತು.
ಸುಮಾರು 4 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಈ ಅಭಿಯಾನದಲ್ಲಿ ನೂರಾರು ಸಾರ್ವಜನಿಕರು ಪಾಲ್ಗೊಂಡಿದ್ದರು. ಅರಣ್ಯ, ಕಂದಾಯ, ವಿದ್ಯುತ್, ಗ್ರಾಮೀಣ ಕುಡಿಯುವ ನೀರು, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಸಾರಿಗೆ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಒಟ್ಟು 134 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಅರಣ್ಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚಿದ್ದವು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಹಲವು ಅರ್ಜಿಗಳನ್ನು ಸ್ಥಳದಲ್ಲೇ ಪರಿಹರಿಸಲಾಗಿದೆ. ಉಳಿದ ಅರ್ಜಿಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು. ಆರೋಗ್ಯ, ಮನೆ ನಿರ್ಮಾಣ ಸೇರಿದಂತೆ ಹಲವು ಸೌಲಭ್ಯಗಳನ್ನು ಸ್ಥಳದಲ್ಲೇ ಒದಗಿಸಲಾಯಿತು ಎಂದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಗರಂ ಆದ ಅವರು, ಜನಸಾಮಾನ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ಗಂಭೀರವಾಗಿ ಸ್ಪಂದಿಸಬೇಕು, ಬೇಜವಾಬ್ದಾರಿತನವನ್ನು ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಸವಲತ್ತುಗಳ ವಿತರಣೆ: ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ವತಿಯಿಂದ ಅರ್ಹ ಮಹಿಳೆಯರಿಗೆ ಹೊಲಿಗೆ ಯಂತ್ರ, ಕಾಡಂಚಿನ ನಿವಾಸಿಗಳಿಗೆ ಹಕ್ಕುಪತ್ರ, ಅಂತರ್ಜಾತಿ ವಿವಾಹವಾದ ಜೋಡಿಗಳಿಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಐಟಿಡಿಪಿ ಇಲಾಖೆ ವತಿಯಿಂದ ತಲಾ 1.50 ಲಕ್ಷ ರೂ. ಪ್ರೋತ್ಸಾಹಧನ ಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ತಹಶೀಲ್ದಾರ್ ಸಂಜನಾ, ವಿರಾಜಪೇಟೆ ತಹಶೀಲ್ದಾರ್ ಪ್ರವೀಣ್, ತಾಲೂಕು ಗ್ಯಾರಂಟಿ ಅಧ್ಯಕ್ಷ ಕಾಳಿಮಡ ಪ್ರಶಾಂತ್, ಬಗರ್ ಹುಕುಂ ಅಧ್ಯಕ್ಷ ಅಣ್ಣಳ್ಳಮಡ ಲಾಲಾ ಅಪ್ಪಣ್ಣ, ತಾ.ಪಂ ಇಓ ರಾಜೇಶ್ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.