ಆಲೂರು ಸಿದ್ದಾಪುರದಲ್ಲಿ ಪ್ರಜಾ ಸೇವಾ ಆಂದೋಲನ
admincoorgdaily

ಶನಿವಾರಸಂತೆ;
ರಾಜ್ಯ ಸರ್ಕಾರದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದ ಮೂಲಕ ಜನರ ವೈಯಕ್ತಿಕ ಮತ್ತು ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣಮೂರ್ತಿ ಹೇಳಿದರು.
ಸಮೀಪದ ಆಲೂರು ಸಿದ್ದಾಪುರ ಸಾರ್ವಜನಿಕ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಆಲೂರು ಸಿದ್ದಾಪುರ ಗ್ರಾ.ಪಂ. ಮಟ್ಟದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮವು ಗ್ರಾ.ಪಂ., ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ನಡೆಯುತ್ತದೆ. ಈ ಆಂದೋಲನ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಸ್ಥಳೀಯ ಮಟ್ಟದ ಅಧಿಕಾರಿಗಳು ಸೇರಿದಂತೆ ಹೋಬಳಿ, ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು, ಇಲಾಖೆ ಸಿಬ್ಬಂದಿ ಪಾಲ್ಗೊಳ್ಳುತ್ತಾರೆ ಎಂದರು.
ಜನರು ತಮ್ಮ ವೈಯಕ್ತಿಕ ಅರ್ಜಿ, ಗ್ರಾಮದ ಸಮಸ್ಯೆ, ಕುಂದುಕೊರತೆಗಳ ಕುರಿತಾದ ಅರ್ಜಿಯನ್ನು ನೀಡಲು ಅವಕಾಶವಿದ್ದು, ನೀಡಿದ ಅರ್ಜಿಯು ಅಂತರ್ಜಾಲದಲ್ಲಿ ದಾಖಲಾಗುತ್ತದೆ. ಈ ಮೂಲಕ ಅರ್ಜಿದಾರರು ಸಲ್ಲಿಸಿದ ಮನವಿ ವಿಲೇವಾರಿಗೊಳ್ಳುತ್ತದೆ. ಇದರಿಂದ ಜನರ ಮತ್ತು ಗ್ರಾಮದ ಸಮಸ್ಯೆ ಇತ್ಯರ್ಥಗೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಆರೋಗ್ಯ ಕೇಂದ್ರ ಶಿಥಿಲ - ಗ್ರಾಮಸ್ಥರ ದೂರು;
ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲಗೊಂಡಿದ್ದು, ಈ ಕಟ್ಟಡದಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸಲು ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಆಂದೋಲನ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ಅಧಿಕಾರಿ, ಈಗಾಗಲೇ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಕಟ್ಟಡ ಕಾಮಗಾರಿ ಆರಂಭಗೊಳ್ಳುತ್ತದೆ. ಶೀಘ್ರದಲ್ಲೇ ಆರೋಗ್ಯ ಕೇಂದ್ರವನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದರು.
ಪ್ರಜಾ ಸೇವಾ ಆಂದೋಲನ ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಗ್ರಾ.ಪಂ. ಆಡಳಿತಾಧಿಕಾರಿ ರಾಜೇಶ್, ಶನಿವಾರಸಂತೆ ಸಿಐ ಕೃಷ್ಣರಾಜ್ ಮುಂತಾದವರು ಹಾಜರಿದ್ದರು.
ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಇಲಾಖೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಜನರ ವೈಯಕ್ತಿಕ ಮತ್ತು ಗ್ರಾಮದ ಸಮಸ್ಯೆಗಳ ಕುರಿತಾದ ಅರ್ಜಿಯನ್ನು ಸ್ವೀಕರಿಸಿ ಅಂತರ್ಜಾಲದಲ್ಲಿ ದಾಖಲಿಸಿಕೊಂಡರು.