Kodagu

ವಿರಾಜಪೇಟೆ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

admincoorgdaily

ವಿರಾಜಪೇಟೆ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ
ವಿರಾಜಪೇಟೆ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಿರಾಜಪೇಟೆ ಸೇವಾ ಕೇಂದ್ರದಲ್ಲಿ ಪಾವನ ಪರ್ವ ರಕ್ಷಾಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

  ಕಾರ್ಯಕ್ರಮದಲ್ಲಿ ಮಡಿಕೇರಿ ಶಾಖೆಯ ಸಹ ಸಂಚಾಲಕಿ(ಮಾಧ್ಯಮ ವಿಭಾಗ) ಬಿ.ಕೆ. ಧನಲಕ್ಷ್ಮಿ ಅವರು ರಕ್ಷಾಬಂಧನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿಸಿ ಮಾತನಾಡಿ, "ಯಾರು ಪರಮಾತ್ಮನ ನೆನಪು ಎಂಬ ಶ್ರೀರಕ್ಷೆಯಲ್ಲಿ ಬಂಧಿತರಾಗುತ್ತಾರೋ ಅವರಿಗೆ ಉಳಿದೆಲ್ಲಾ ಬಂಧನಗಳು ದೂರವಾಗುತ್ತವೆ. ಜೀವನದಲ್ಲಿ ಪವಿತ್ರ ಧಾರಣೆ ಮಾಡುವ ಪ್ರತಿಜ್ಞೆ ಮಾಡಿಕೊಂಡು ಪಾವನರಾಗುವುದೇ ನಿಜವಾದ ರಾಖಿ ಕಟ್ಟಿಕೊಳ್ಳುವುದಾಗಿದೆ. ಆಧ್ಯಾತ್ಮಿಕ ದೃಷ್ಟಿಯ ತಿಲಕವಿಟ್ಟು, ಸಿಹಿ ತಿಂದು ಬಾಯಿ ಎಷ್ಟು ಮಧುರವಾಗುತ್ತದೋ, ಹಾಗೆಯೇ ನಮ್ಮ ಮಾತು ಮಧುರವಾಗಿರಬೇಕು. ಮಾತಿನಿಂದ ಯಾರಿಗೂ ದುಃಖ ನೀಡಬಾರದು. ಶ್ರೀಕೃಷ್ಣನು ಸತ್ಯಯುಗದ ಪ್ರಥಮ ರಾಜಕುಮಾರ ಹಾಗೂ ದೇವತಾ ಪುರುಷನಾಗಿದ್ದು, ಮರ್ಯಾದಾ ಪುರುಷೋತ್ತಮನಾಗಿದ್ದಾನೆ. ಜನ್ಮಾಷ್ಟಮಿಯ ಈ ಶುಭ ಸಂದರ್ಭದಲ್ಲಿ ನಾವು ಶ್ರೀಕೃಷ್ಣನಂತೆ ದೈವಿ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಕ್ಷಾಬಂಧನ ಎಂದರೆ ಕೇವಲ ದಾರ ಕಟ್ಟಿಕೊಳ್ಳುವುದಲ್ಲ, ಮನಸ್ಸನ್ನು ಸಕಾರಾತ್ಮಕ ಮಾಡಿಕೊಳ್ಳುವುದಾಗಿದೆ. ಮನಸ್ಸನ್ನು ಬಲಶಾಲಿ ಮಾಡಿಕೊಳ್ಳಲು ರಾಜಯೋಗ (ಧ್ಯಾನ) ಅಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.

  ವಿರಾಜಪೇಟೆ ಶಾಖೆಯ ಮುಖ್ಯ ಸಂಚಾಲಕಿ ಬಿ.ಕೆ. ಕೋಮಲ ಮಾತನಾಡಿ, "ರಕ್ಷಾಬಂಧನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬಗಳು ಮಾನವ ಜೀವನದಲ್ಲಿ ಪವಿತ್ರತೆ ಹಾಗೂ ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುವ ದಿವ್ಯ ಸಂಕೇತಗಳಾಗಿವೆ. ಮನಸ್ಸನ್ನು ಕಲ್ಮಶಗಳಿಂದ ಮುಕ್ತಗೊಳಿಸಿ, ಪರಮಾತ್ಮನ ದಿವ್ಯ ಶಕ್ತಿಯನ್ನು ಪಡೆಯಲು ಈ ಶುಭ ಪರ್ವಗಳು ಪ್ರೇರಣೆ ನೀಡುತ್ತವೆ ಎಂದು ಹಬ್ಬಗಳ ಮಹತ್ವವನ್ನು ವಿವರಿಸಿದರು.

 ಇದೇ ಸಂದರ್ಭದಲ್ಲಿ ಕಾವೇರಿ ಆಶ್ರಮದ ಸ್ವಾಮಿಜಿಗಳು, ವಿರಾಜಪೇಟೆಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿನ ಎಚ್.ಎನ್. ವಿಜಯಲಕ್ಷ್ಮಿ, ಮಾಜಿ ಸೈನಿಕರಾದ ಎನ್.ಎಂ. ಚಂಗಪ್ಪ, ನಿವೃತ್ತ ಶಿಕ್ಷಕರಾದ ಪಿ.ಎಂ. ಅಕ್ಕಮ್ಮ, ಎಂ.ಎ. ದೇವಮ್ಮ, ಕರ್ನಲ್ ಪಿ.ಸಿ. ಕರುಂಬಯ್ಯ, ಡಾ. ಕೆ.ಪಿ. ರೋಷನ್, ಡಾ. ಧನ್ಯ ಎ., ದಕ್ಷ, ಉತ್ತಪ್ಪ, ಶ್ಯಾಮ ಪೊನ್ನಪ್ಪ, ಚಂದ್ರ ಹಾಗೂ ಶೈಲ ಉಪಸ್ಥಿತರಿದ್ದರು.

   ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದವರಿಗೂ ಮತ್ತು ಗಣ್ಯರಿಗೆ ಈಶ್ವರೀಯ ರಕ್ಷೆಯನ್ನು (ರಾಖಿ) ಕಟ್ಟಲಾಯಿತು. ನಂತರ ಅತಿಥಿಗಳಿಗೆ ಈಶ್ವರೀಯ ಉಡುಗೊರೆ ಹಾಗೂ ಪ್ರಸಾದ ವಿತರಿಸಲಾಯಿತು.