Kodagu

ಕರ್ನಾಟಕ ಜಾನಪದ ಅಕಾಡೆಮಿ 2026ರ ಗೌರವ ಪ್ರಶಸ್ತಿಗೆ ಕೊಡಗಿನ ರಮೇಶ್ ಬಿ.ಬಿ. ಆಯ್ಕೆ

admincoorgdaily

ಕರ್ನಾಟಕ ಜಾನಪದ ಅಕಾಡೆಮಿ 2026ರ ಗೌರವ ಪ್ರಶಸ್ತಿಗೆ ಕೊಡಗಿನ ರಮೇಶ್ ಬಿ.ಬಿ. ಆಯ್ಕೆ
ಮಡಿಕೇರಿ:ಕರ್ನಾಟಕ ಜಾನಪದ ಅಕಾಡೆಮಿಯ 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ರಾಜ್ಯದ 31 ಜಿಲ್ಲೆಗಳಿಂದ 30 ಹಿರಿಯ ಜಾನಪದ ಕಲಾವಿದರು ಮತ್ತು ಇಬ್ಬರು ತಜ್ಞರು ಆಯ್ಕೆಯಾಗಿದ್ದು, ಕೊಡಗು ಜಿಲ್ಲೆಯಿಂದ ಬಾಡಗ ಗದ್ದೆಹಾಡಿಯ ಜಾನಪದ ನೃತ್ಯ ಕಲಾವಿದ ಶ್ರೀ ರಮೇಶ್ ಬಿ.ಬಿ. ಅವರು ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದ್ದಾರೆ.

ಅ.19ರಂದು ಮಂಡ್ಯ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರಕಟಣೆ ನೀಡಿದ ಅವರು, ಅ.14ರಂದು ಬೆಂಗಳೂರಿನಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ ಎಂದರು.

1980ರಿಂದ ಕಾರ್ಯನಿರ್ವಹಿಸುತ್ತಿರುವ ಅಕಾಡೆಮಿಯು 1980ರಿಂದ 2025ರವರೆಗೆ 1134 ಕಲಾವಿದರು, 117 ವಿದ್ವಾಂಸರು ಸೇರಿದಂತೆ ಒಟ್ಟು 1251 ಗೌರವ ಪ್ರಶಸ್ತಿಗಳನ್ನು ನೀಡಿದೆ. 2026-27ನೇ ಸಾಲಿನಲ್ಲಿ 30 ಕಲಾವಿದರಿಗೆ ತಲಾ ರೂ.25,000 ಹಾಗೂ ಇಬ್ಬರು ತಜ್ಞರಿಗೆ ತಲಾ ರೂ.50,000 ನಗದು, ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಡಾ. ಕೆಂಪಮ್ಮ, ಶ್ರೀ ಮಂಜೇಶ್ ಚೆನ್ನಾಪುರ, ಶ್ರೀ ಕೆಂಕೆರೆ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.