ಹಿರಿಯರನ್ನು ಗೌರವಿಸಿ, ಮಕ್ಕಳಿಗೆ ಮೌಲ್ಯವನ್ನು ಕಲಿಸಿ: ಶುಭ
admincoorgdaily

ಮಡಿಕೇರಿ:-ಇಂದಿನ ಮಕ್ಕಳಿಗೆ ಶಿಕ್ಷಣ ಹಾಗೂ ವಿವಿಧ ಕೌಶಲ್ಯಗಳ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಜೊತೆಗೆ ಮಾನವೀಯ ಮೌಲ್ಯಗಳು, ಕುಟುಂಬ ಸಂಬಂಧಗಳು ಮತ್ತು ಹಿರಿಯರನ್ನು ಗೌರವಿಸುವ ಸಂಸ್ಕೃತಿಯನ್ನು ಕಲಿಸುವ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ದೀರ್ಘಾಯುಷ್ಯದ ಯುಗ: ಸುದೀರ್ಘ ಜೀವನಕ್ಕಾಗಿ ಜೀವನ ಕ್ರಮಗಳ ಮರು ಚಿಂತನೆ ಎಂಬ ಘೋಷವಾಕ್ಯದೊಂದಿಗೆ ಗುರುವಾರ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ಮಕ್ಕಳ ಜತೆ ಪೋಷಕರು ಬೆರೆಯಬೇಕು. ಯಾವುದೇ ಸಂದರ್ಭದಲ್ಲಿ ‘ನನ್ನ ತಂದೆ-ತಾಯಿ ನನಗೆ ಸಿಗುತ್ತಾರೆ’ ಎಂಬ ಭರವಸೆ ಮಕ್ಕಳಲ್ಲಿ ಮೂಡಬೇಕು. ಅದೇ ರೀತಿ ಜೀವನದ ಆರಂಭ ಮತ್ತು ಅಂತ್ಯದಲ್ಲಿ ಮನುಷ್ಯ ಅಸಹಾಯಕ ಸ್ಥಿತಿಯಲ್ಲಿರುತ್ತಾನೆ. ಮಗು ಸ್ವಾವಲಂಬಿಯಾಗುವವರೆಗೆ ಪೋಷಕರ ಆರೈಕೆ ಅಗತ್ಯವಿರುವಂತೆ, ವೃದ್ಧಾಪ್ಯದಲ್ಲಿರುವ ತಂದೆ-ತಾಯಿಗೂ ಮಕ್ಕಳ ಸಹಕಾರ, ಆರೈಕೆ ಮತ್ತು ತಾಳ್ಮೆ ಅಗತ್ಯ ಎಂದು ಶುಭ ಅವರು ಅಭಿಪ್ರಾಯಪಟ್ಟರು.
ತಂತ್ರಜ್ಞಾನ ಯುಗದಲ್ಲಿ ನಾವು ಬಹಳಷ್ಟು ಮುಂದುವರಿದಿದ್ದೇವೆ. ಯಾವುದೇ ಮಾಹಿತಿ ಕ್ಷಣಾರ್ಧದಲ್ಲಿ ದೊರೆಯುತ್ತಿದೆ. ಹಲವು ತಂತ್ರಜ್ಞಾನಗಳು ನಮ್ಮ ಬೆರಳ ತುದಿಯಲ್ಲಿವೆ. ಆದರೆ ಮಾನವೀಯತೆ ಮತ್ತು ಪರಸ್ಪರ ಕಾಳಜಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ಮಕ್ಕಳಿಗೆ ಹೆಚ್ಚಿನ ಅಂಕ ಅಥವಾ ರ್ಯಾಂಕ್ ಪಡೆಯುವ ಗುರಿಗಿಂತಲೂ ನೈತಿಕ ಮೌಲ್ಯಗಳು, ಜೀವನ ಮೌಲ್ಯಗಳು ಹಾಗೂ ಮಾನವೀಯ ಗುಣಗಳನ್ನು ಕಲಿಸುವುದು ಮುಖ್ಯ ಎಂದರು.
ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಅಜ್ಜ-ಅಜ್ಜಿ, ಅತ್ತೆ-ಮಾವ, ಚಿಕ್ಕಪ್ಪ-ಚಿಕ್ಕಮ್ಮ ಸೇರಿದಂತೆ ಹಲವು ಸಂಬಂಧಗಳ ನಡುವೆ ಮಕ್ಕಳು ಬೆಳೆಯುತ್ತಿದ್ದರು. ಇದರಿಂದ ಕುಟುಂಬ ಸಂಬಂಧಗಳ ಅರಿವು ಮತ್ತು ಹಿರಿಯರೊಂದಿಗೆ ಬೆರೆಯುವ ಗುಣ ಸಹಜವಾಗಿ ಮೂಡುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಅನೇಕ ಸಂಬಂಧಗಳು ‘ಆಂಟಿ’, ‘ಅಂಕಲ್’ ಎಂಬ ಸಾಮಾನ್ಯ ಸಂಬೋಧನೆಗಳಿಗೆ ಸೀಮಿತವಾಗುತ್ತಿರುವುದು ಕುಟುಂಬ ವ್ಯವಸ್ಥೆಯಲ್ಲಿನ ಬದಲಾವಣೆಯನ್ನು ತೋರಿಸುತ್ತದೆ. ಭಾರತೀಯ ಸಂಸ್ಕತಿಯಲ್ಲಿರುವ ಕುಟುಂಬ ಮೌಲ್ಯಗಳು ಮತ್ತು ಹಿರಿಯರನ್ನು ಗೌರವಿಸುವ ಪರಂಪರೆ ಮುಂದುವರಿಸಬೇಕಿದೆ ಎಂದು ಶುಭ ಅವರು ಹೇಳಿದರು.
ಹಿರಿಯ ನಾಗರಿಕರ ಪಾಲನೆ ಮತ್ತು ಪೋಷಣೆಗೆ ಕಾನೂನು ವ್ಯವಸ್ಥೆಯೂ ಇದೆ. 2007ರ ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯ್ದೆಯಡಿ ಅಗತ್ಯವಿದ್ದಲ್ಲಿ ಹಿರಿಯರು ನಿರ್ವಹಣಾ ನೆರವು ಪಡೆಯಲು ಕಾನೂನು ಮಾರ್ಗವನ್ನು ಅನುಸರಿಸಬಹುದು. ಇಂತಹ ಸಂದರ್ಭಗಳಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದಲೂ ಅಗತ್ಯ ಕಾನೂನು ನೆರವು ಪಡೆಯುವ ಅವಕಾಶವಿದೆ ಎಂದು ತಿಳಿಸಿದರು.
ಹಿರಿಯರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯ ಪ್ರಮುಖ ಮೌಲ್ಯವಾಗಿದೆ. ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿಯೂ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಗೌರವಿಸುವ ಜವಾಬ್ದಾರಿ ಒತ್ತಿ ಹೇಳಲಾಗಿದೆ. ಕೊಡಗಿನಲ್ಲಿಯೂ ಹಿರಿಯರನ್ನು ಗೌರವಿಸುವ ಹಲವು ಉತ್ತಮ ಸಂಪ್ರದಾಯಗಳಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಮುಂದುವರಿಸಬೇಕು ಎಂದು ಶುಭ ಅವರು ಸಲಹೆ ನೀಡಿದರು.
ಪಿತೃಪಕ್ಷದ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸುವ ಪದ್ಧತಿಯನ್ನು ಪಾಲಿಸುವುದರ ಜೊತೆಗೆ, ತಂದೆ-ತಾಯಿ ಬದುಕಿರುವಾಗಲೇ ಅವರ ಅಗತ್ಯಗಳನ್ನು ಅರಿತುಕೊಂಡು ಕಾಳಜಿ ವಹಿಸುವುದು ಅತ್ಯಂತ ಮುಖ್ಯ. ವಯಸ್ಸಾದವರೊಂದಿಗೆ ಮಾತನಾಡುವುದು ಕೂಡ ಅವರಲ್ಲಿ ಆತ್ಮೀಯತೆ ಮತ್ತು ಭದ್ರತೆಯ ಭಾವನೆ ಮೂಡಿಸುತ್ತದೆ. ವೃದ್ಧರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಅವರಿಗೆ ಅಗತ್ಯವಿರುವುದು ದೊಡ್ಡ ಸಹಾಯವಲ್ಲ; ಪ್ರೀತಿ, ಗೌರವ, ತಾಳ್ಮೆ ಮತ್ತು ಆತ್ಮೀಯತೆಯೇ ಮುಖ್ಯ. ಹಿರಿಯರನ್ನು ಗೌರವಿಸುವ ಮೌಲ್ಯವನ್ನು ಮಕ್ಕಳಿಗೆ ಕಲಿಸದಿದ್ದರೆ ಸಮಾಜದ ಭವಿಷ್ಯದ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಎಚ್ಚರಿಸಿದರು.
ಹಿರಿಯ ವಕೀಲರಾದ ಮೀನಾ ಕುಮಾರಿ ಮಾತನಾಡಿ, ಪ್ರತಿಯೊಬ್ಬರಿಗೂ ಗೌರವಯುತವಾಗಿ ಬದುಕುವ ಹಕ್ಕಿದೆ. ವಯಸ್ಸಾಗಿದೆ ಎಂಬ ಕಾರಣಕ್ಕೆ ಯಾರಾದರೂ ಹಿರಿಯರನ್ನು ಕಡೆಗಣಿಸಿದರೆ ಅಥವಾ ಹಿಂಸಿಸಿದರೆ ಅದನ್ನು ಸಹಿಸಿಕೊಂಡು ಸುಮ್ಮನಿರಬೇಕಾಗಿಲ್ಲ.
ಕಾನೂನಿನ ಮೂಲಕ ರಕ್ಷಣೆ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ನಿವೃತ್ತಿಯ ನಂತರ ಜೀವನ ಮುಗಿಯುವುದಿಲ್ಲ. ಹಿರಿಯರ ಅನುಭವ ಮತ್ತು ಜ್ಞಾನ ಸಮಾಜಕ್ಕೆ ಅಮೂಲ್ಯ ಸಂಪತ್ತಾಗಿದ್ದು, ಅದನ್ನು ಮುಂದಿನ ಪೀಳಿಗೆಗೆ ಹಂಚಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
ನಿವೃತ್ತರಾದ ನಂತರ ತಮ್ಮ ಜೀವನದ ಪ್ರಯೋಜನ ಮುಗಿಯಿತು ಎಂದು ಯಾರೂ ಭಾವಿಸಬಾರದು. ಇಂದಿನ ಪೀಳಿಗೆಯವರಿಗೆ ಜ್ಞಾನ ಮತ್ತು ಹೊಸ ತಂತ್ರಜ್ಞಾನಗಳ ಅರಿವು ಇರಬಹುದು. ಆದರೆ ಯಾವುದೇ ಕೆಲಸವನ್ನು ಹೇಗೆ ಮಾಡಬೇಕು ಎಂಬುದನ್ನು ಕಲಿಸುವಲ್ಲಿ ಹಿರಿಯರ ಅನುಭವಕ್ಕೆ ವಿಶೇಷ ಸ್ಥಾನವಿದೆ ಎಂದು ಅವರು ತಿಳಿಸಿದರು.
‘ಹೊಸ ಚಿಗುರು, ಹಳೆ ಬೇರು ಸೇರಿದರೆ ಮರಕ್ಕೆ ಶೋಭೆ’ ಎಂಬಂತೆ, ಹೊಸ ಪೀಳಿಗೆಯ ಉತ್ಸಾಹದೊಂದಿಗೆ ಹಿರಿಯರ ಅನುಭವವೂ ಸೇರಿದಾಗ ಸಮಾಜ ಮತ್ತಷ್ಟು ಸಮೃದ್ಧವಾಗುತ್ತದೆ. ಹಿರಿಯರ ಮಾರ್ಗದರ್ಶನ ಇಂದಿನ ಪೀಳಿಗೆಗೆ ಅತ್ಯಗತ್ಯವಾಗಿದ್ದು, ಅವರ ಅನುಭವಗಳನ್ನು ಕೇಳಿಕೊಳ್ಳುವುದರಿಂದ ಯುವಜನರು ಜೀವನದಲ್ಲಿ ಮುಂದೆ ಸಾಗಲು ಸುಲಭವಾಗುತ್ತದೆ ಎಂದರು.
ಹಿರಿಯರ ಜೀವನವೇ ಒಂದು ವಿಶ್ವವಿದ್ಯಾಲಯವಿದ್ದಂತೆ. ಅವರ ಪ್ರತಿಯೊಂದು ವರ್ಷವೂ ಜೀವನದ ಪುಸ್ತಕದ ಒಂದೊಂದು ಅಧ್ಯಾಯವಾಗಿದೆ. ಆದ್ದರಿಂದ ಹಿರಿಯರು ತಾವು ಸಮಾಜಕ್ಕೆ ಉಪಯೋಗವಿಲ್ಲದವರು ಎಂಬ ಭಾವನೆ ಬೆಳೆಸಿಕೊಳ್ಳದೆ, ತಮ್ಮ ಅನುಭವವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇದುವರೆಗೆ ಕುಟುಂಬ ಮತ್ತು ಸಮಾಜಕ್ಕಾಗಿ ಜೀವನವನ್ನು ಮುಡಿಪಾಗಿಟ್ಟಿರುವ ಹಿರಿಯರು ಇನ್ನು ಮುಂದೆ ತಮ್ಮ ಆರೋಗ್ಯ, ಆಸಕ್ತಿ ಹಾಗೂ ವೈಯಕ್ತಿಕ ಜೀವನಕ್ಕೂ ಸಮಯ ನೀಡಬೇಕು. ತಮ್ಮ ಇಷ್ಟದ ಚಟುವಟಿಕೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ಸಂತೋಷದಿಂದ ಜೀವನ ನಡೆಸಬೇಕು ಎಂದರು.
‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007’ರಡಿ ಹಿರಿಯ ನಾಗರಿಕರಿಗೆ ದೊರೆಯುವ ಹಕ್ಕುಗಳು ಮತ್ತು ಕಾನೂನು ರಕ್ಷಣೆಯ ಕುರಿತು ಅರಿವು ಹೊಂದುವುದು ಅಗತ್ಯ ಎಂದು ಅವರು ಹೇಳಿದರು.
ಮಡಿಕೇರಿ ಬ್ರಹ್ಮಕುಮಾರಿ ಶಾಖೆಯ ಧನಲಕ್ಷ್ಮಿ ಅವರು ಮಾತನಾಡಿ, ವಯಸ್ಸು ಶರೀರಕ್ಕಷ್ಟೇ ಹೊರತು ಮನಸ್ಸಿಗಲ್ಲ. 60ರ ನಂತರದ ಬದುಕನ್ನು ‘ಇನ್ನು ನಮ್ಮಿಂದ ಏನೂ ಸಾಧ್ಯವಿಲ್ಲ’ ಎಂಬ ಮನಸ್ಥಿತಿಗೆ ಸೀಮಿತಗೊಳಿಸದೆ, ಉತ್ಸಾಹದಿಂದ ಪ್ರತಿಕ್ಷಣವನ್ನು ಅನುಭವಿಸಬೇಕು ಎಂದು ಕರೆ ನೀಡಿದರು.
ಬಾಲ್ಯ, ಯೌವನ ಹಾಗೂ ಪ್ರೌಢಾವಸ್ಥೆಯಲ್ಲಿ ಹಲವು ರೀತಿಯ ಜವಾಬ್ದಾರಿ ಮತ್ತು ಒತ್ತಡಗಳನ್ನು ಎದುರಿಸಿರುವ ಹಿರಿಯರು, ಇದೀಗ ಸ್ವತಂತ್ರವಾಗಿ ಬದುಕುವ ಅವಕಾಶವನ್ನು ಪಡೆದಿದ್ದಾರೆ. ಈ ಸಮಯವನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಬಯಸಿದ್ದನ್ನು ಸಾಧಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
60ರ ನಂತರದ ಬದುಕು ವಿಶ್ರಾಂತಿಗೆ ಮಾತ್ರ ಸೀಮಿತವಾಗದೆ, ಕಲಿಕೆ, ಚಟುವಟಿಕೆ, ಸಂತೋಷ ಹಾಗೂ ಸಮಾಜದೊಂದಿಗೆ ಬೆರೆಯುವ ಮೂಲಕ ಅರ್ಥಪೂರ್ಣವಾಗಬೇಕು. ಸ್ವತಂತ್ರ ಬದುಕಿನ ಈ ಅವಧಿಯನ್ನು ಸದುಪಯೋಗಪಡಿಸಿಕೊಂಡರೆ ಜೀವನ ಮತ್ತಷ್ಟು ಸುಂದರವಾಗುತ್ತದೆ ಎಂದು ಧನಲಕ್ಷ್ಮಿ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಸುಮಂಗಲಾ ಜಿ.ಹಿರೇಮನಿ ಅವರು, ಹಿರಿಯರ ಅನುಭವ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂದು ಹಾರೈಸಿದರು. ಹಿರಿಯರಾದ ತಿಮ್ಮಯ್ಯ ಅವರು ಮಾತನಾಡಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ನಾಲ್ವರು ಹಿರಿಯ ನಾಗರಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ನಡೆದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಪ್ರಸನ್ನ ಕುಮಾರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸೀತಾಲಕ್ಷ್ಮಿ, ಹಿರಿಯರಾದ ಮಾದಮಯ್ಯ, ತಿಮ್ಮಯ್ಯ, ಜಿಮ್ಮಿ ಅಣ್ಣಯ್ಯ, ಬೋಸ್ ಮೊಣ್ಣಪ್ಪ, ಮಲ್ಲಪ್ಪ, ಶಂಕರಿ ಪೊನ್ನಪ್ಪ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಗಳು, ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಹಿರಿಯರಾದ ಸೀತಮ್ಮ ಪ್ರಾರ್ಥಿಸಿದರು, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಜಿ.ವಿಮಲ ಅವರು ಸ್ವಾಗತಿಸಿದರು, ಮಾಹಿತಿ ಸಲಹೆಗಾರರಾದ ನವೀನ್ ನಿರೂಪಿಸಿ, ವಂದಿಸಿದರು.