Kodagu

ಭತ್ತದ ಬೆಳೆಗೆ ಬೆಂಕಿ ರೋಗ: ತುರ್ತು ನಿರ್ವಹಣೆಗೆ ಕೃಷಿ ಇಲಾಖೆ ಮನವಿ

admincoorgdaily

ಭತ್ತದ ಬೆಳೆಗೆ ಬೆಂಕಿ ರೋಗ: ತುರ್ತು ನಿರ್ವಹಣೆಗೆ ಕೃಷಿ ಇಲಾಖೆ ಮನವಿ
ಮಡಿಕೇರಿ :-ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆಗೆ ಅಲ್ಲಲ್ಲಿ ಬೆಂಕಿ ರೋಗದ ಬಾಧೆ ಕಂಡುಬಂದಿದ್ದು,  ತುರ್ತು ನಿರ್ವಹಣೆ ಕಾರ್ಯ ಕೈಗೊಳ್ಳಬೇಕೆಂದು ರೈತ ಬಾಂಧವರಲ್ಲಿ ಮನವಿ. ವಿಶೇಷವಾಗಿ ತಡವಾಗಿ ನಾಟಿ ಮಾಡಿದ ಹಾಗೂ ಅತಿ ಹೆಚ್ಚು ಯೂರಿಯಾ ರಸಗೊಬ್ಬರ ನೀಡಲಾದ ಭತ್ತದ ಗದ್ದೆಗಳಲ್ಲಿ ಬೆಂಕಿ ರೋಗದ ಬಾಧೆ ಹೆಚ್ಚಿಗೆ ಕಂಡು ಬಂದಿರುತ್ತದೆ. 

ಎಲೆಯ ಮೇಲ್ಭಾಗದಲ್ಲಿ ಕಂದು-ಬೂದು ಬಣ್ಣದ ಚುಕ್ಕೆಗಳು ಪ್ರಥಮ ಹಂತದಲ್ಲಿ ಕಂಡುಬರುತ್ತವೆ. ನಂತರ ರೋಗದ ತೀವ್ರತೆ ಹೆಚ್ಚಾದಾಗ ಚುಕ್ಕೆಗಳು ಒಂದಕ್ಕೊಂದು ಸೇರಿಕೊಂಡು ಎಲೆಯ ಪೂರ್ತಿ ಭಾಗಕ್ಕೆ ಹರಡಿಕೊಳ್ಳುತ್ತವೆ. ಈ ಬೆಂಕಿ ರೋಗವನ್ನು ಪ್ರಥಮ ಹಂತದಲ್ಲಿಯೇ ನಿಯಂತ್ರಿಸದಿದ್ದಲ್ಲಿ ನಂತರ ತೆನೆ ಕುತ್ತಿಗೆ ರೋಗ ಬಂದು ಬೆಳೆ ತೆನೆಗಳು ಜೊಳ್ಳು ಆಗುವ ಸಂಭವ ಹೆಚ್ಚಿರುತ್ತದೆ. 

ಈ ಹಿನ್ನೆಲೆ ರೈತರು ತುರ್ತಾಗಿ ತಮ್ಮ ಭತ್ತದ ಜಮೀನಿಗೆ ಭೇಟಿ ನೀಡಿ ಬೆಂಕಿ ರೋಗ ಲಕ್ಷಣಗಳು ಕಂಡುಬಂದಲ್ಲಿ ತುರ್ತಾಗಿ 0.6 ಗ್ರಾಂ ಟ್ರೈಸೈಕ್ಲೋಜೋಲ್ ಶಿಲೀಂಧ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪ್ರತೀ ಎಕರೆಗೆ 200 ರಿಂದ 250 ಲೀಟರ್ ದ್ರಾವಣದ ಅವಶ್ಯಕತೆ ಇರುತ್ತದೆ. ಹೆಚ್ಚಿನ ಮಾಹಿತಿಗೆ ಆಯಾಯ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಾದ ಪ್ರವೀಣ್ ಅವರು ಮನವಿ ಮಾಡಿದ್ದಾರೆ.