Kodagu

ಮೂರ್ನಾಡು ಎಂ.ಇ.ಎಸ್. ಪ್ರೌಢಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಕಾರ್ಯಕ್ರಮ : ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆಗೆ ಪ್ರೋತ್ಸಾಹ

admincoorgdaily

ಮೂರ್ನಾಡು ಎಂ.ಇ.ಎಸ್. ಪ್ರೌಢಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಕಾರ್ಯಕ್ರಮ : ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆಗೆ ಪ್ರೋತ್ಸಾಹ
ಮಡಿಕೇರಿ ಸೆ.21 : ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮಡಿಕೇರಿ ರೋಟರಿ ವತಿಯಿಂದ ಮೂರ್ನಾಡು ಎಂ.ಇ.ಎಸ್. ಪ್ರೌಢಶಾಲೆಯ ರೋಟರಿ ಇಂಟರಾಕ್ಟ್ ಕ್ಲಬ್ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.

ಇಂಟರಾಕ್ಟ್ ಅಧ್ಯಕ್ಷೆ ಜಿಯಾ ಫಾತಿಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ಉದ್ದೇಶದಿಂದ ಮಡಿಕೇರಿ ರೋಟರಿಯ ರೋ. ಈಶ್ವರ್ ಭಟ್ ಅವರು ಶಾಲೆಗೆ ಪ್ರೊಜೆಕ್ಟರ್ ಹಾಗೂ ಸ್ಕ್ರೀನ್ ಗಳನ್ನು ಕೊಡುಗೆಯಾಗಿ ಶಾಲಾ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು.

ನಂತರ ಮಾತನಾಡಿದ ಅವರು ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದ್ದು, ಪ್ರೊಜೆಕ್ಟರ್ ಹಾಗೂ ಸ್ಕ್ರೀನ್ ಗಳಂತಹ ಸೌಲಭ್ಯಗಳು ವಿದ್ಯಾರ್ಥಿಗಳ ಕಲಿಕೆಯನ್ನು ಪರಿಣಾಮಕಾರಿ ಹಾಗೂ ಆಸಕ್ತಿದಾಯಕವಾಗಿಸಲು ಸಹಕಾರಿಯಾಗಲಿವೆ. ವಿದ್ಯಾರ್ಥಿಗಳು ಸೌಲಭ್ಯಗಳನ್ನು ಜವಾಬ್ದಾರಿಯಿಂದ ಬಳಸಿಕೊಂಡು ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮೂರ್ನಾಡು ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಪುದಿಯೊಕ್ಕಡ ಹರೀಶ್ ದೇವಯ್ಯ ಹಾಗೂ ಖಜಾಂಚಿ ನೆರವಂಡ ಮುತ್ತಪ್ಪ ಮಾತನಾಡಿ, ಶಾಲೆಗೆ ಅಗತ್ಯವಾಗಿದ್ದ ಪ್ರೊಜೆಕ್ಟರ್ ಹಾಗೂ ಸ್ಕ್ರೀನ್  ಗಳನ್ನು ಒದಗಿಸಿದ ರೋ.ಈಶ್ವರ್ ಭಟ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಕೊಡುಗೆಯಿಂದ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತಷ್ಟು ಬಲ ದೊರೆಯಲಿದೆ ಎಂದು ಹೇಳಿದರು. 

ವಿದ್ಯಾರ್ಥಿಗಳಿಗೆ ಗೌರವ:

ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾತಿಂ ಅವರು ವಿದ್ಯಾರ್ಥಿಗಳ ಕ್ರೀಡಾ ಸಾಧನೆಗಳ ಕುರಿತು ಮಾಹಿತಿ ನೀಡಿದರು. ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಿದರು.

ವಿದ್ಯಾರ್ಥಿಗಳ ಪರಿಶ್ರಮ, ಪ್ರತಿಭೆ ಮತ್ತು ಕ್ರೀಡಾಸ್ಫೂರ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಮುಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಉತ್ತೇಜನ ನೀಡಲಾಯಿತು ಎಂದು ರೋಟರಿ ಪ್ರಮುಖರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ರೋಟರಿ ಅಧ್ಯಕ್ಷ ರೋ.ಮನೋಹರ್ ಕಾಮತ್, ಕಾರ್ಯದರ್ಶಿ ರೋ.ಬಿ.ಎಂ.ಸೋಮಣ್ಣ, ರೋ.ಹರಿಣಿ ವಿಜಯ್, ರೋ.ಸುದಯ್ ನಾಣಯ್ಯ, ರೋ.ಲಲಿತಾ ರಾಘವನ್, ಈರಮಂಡ ವಿಜಯ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಮೂರ್ನಾಡು ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಪುದಿಯೊಕ್ಕಡ ಹರೀಶ್ ದೇವಯ್ಯ, ಖಜಾಂಚಿ ನೆರವಂಡ ಮುತ್ತಪ್ಪ, ಸುಜಾತಾ ಎಂ.ಎನ್., ಗೀತಾ ಎ.ಟಿ., ಇಂಟರಾಕ್ಟ್ ಸಂಯೋಜಕಿ ಕಾವೇರಮ್ಮ ಸಿ.ಬಿ., ಇಂಟರಾಕ್ಟ್ ಅಧ್ಯಕ್ಷೆ ಜಿಯಾ ಫಾತಿಮಾ ಹಾಗೂ ಉಪಾಧ್ಯಕ್ಷೆ ಅಫೀಫಾ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳೇ ಕಾರ್ಯಕ್ರಮದ ನಿರೂಪಣೆ, ಪ್ರಾರ್ಥನೆ, ಸ್ವಾಗತ, ಅತಿಥಿಗಳ ಪರಿಚಯ, ಕ್ರೀಡಾ ಸಾಧನೆಗಳ ಪರಿಚಯ ಹಾಗೂ ವಂದನಾರ್ಪಣೆ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದು ವಿಶೇಷವಾಗಿತ್ತು. ಪುಣ್ಯ ಪೊನ್ನಮ್ಮ ಹಾಗೂ ನಿದಾ ಫಾತಿಮಾ ನಿರೂಪಿಸಿದರು. 
ಅಫೀಫಾ ಪ್ರಾರ್ಥಿಸಿದರು, ಶಮೀಲ್ ಸ್ವಾಗತ ಭಾಷಣ ಮಾಡಿದರು. ದುಶ್ಯಂತ್ ಮುತ್ತಣ್ಣ ಗಣ್ಯ ಅತಿಥಿಗಳನ್ನು ಪರಿಚಯಿಸಿದರು, ಅಕ್ಷತಾ ವಂದಿಸಿದರು.
ಕಾರ್ಯಕ್ರಮದಲ್ಲಿ ಇಂಟರಾಕ್ಟ್ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.