Kodagu

ರೋಟರಿ ಪ್ರಾಥಮಿಕ ಶಾಲೆಯ ಪುಟಾಣಿಗಳಿಂದ ಗದ್ದೆಯಲ್ಲಿ ಭತ್ತದ ನಾಟಿ ಪ್ರತ್ಯಕ್ಷ ಅನುಭವ ಹಾಗೂ 'ವೆಟ್‌ಲ್ಯಾಂಡ್ ಸ್ಪೋರ್ಟ್ಸ್' ಸಂಭ್ರಮ!

admincoorgdaily

ರೋಟರಿ ಪ್ರಾಥಮಿಕ ಶಾಲೆಯ ಪುಟಾಣಿಗಳಿಂದ ಗದ್ದೆಯಲ್ಲಿ ಭತ್ತದ ನಾಟಿ ಪ್ರತ್ಯಕ್ಷ ಅನುಭವ ಹಾಗೂ 'ವೆಟ್‌ಲ್ಯಾಂಡ್ ಸ್ಪೋರ್ಟ್ಸ್' ಸಂಭ್ರಮ!
ವಿರಾಜಪೇಟೆ: ಶಾಲೆಗಳಲ್ಲಿ ಕೇವಲ ಪುಸ್ತಕದ ಬಲೆಗೆ ಸೀಮಿತವಾಗದೆ, ಮಕ್ಕಳ ಸರ್ವತೋಮುಖ ಬೆಳೆವಣಿಗೆ ಹಾಗೂ ಕೃಷಿ ಸಂಸ್ಕೃತಿಯ ಪರಿಚಯಕ್ಕಾಗಿ ವಿರಾಜಪೇಟೆ ರೋಟರಿ ಪ್ರಾಥಮಿಕ ಶಾಲೆಯು ವಿನೂತನ ಹಾಗೂ ಮಾದರಿ ಹೆಜ್ಜೆಯೊಂದನ್ನು ಇಟ್ಟಿದೆ. ಕೊಡಗಿನಲ್ಲೇ ಪ್ರಥಮ ಬಾರಿಗೆ ಪ್ಲೇಹೋಮ್‌ನಿಂದ 7ನೇ ತರಗತಿಯವರೆಗಿನ ಪುಟಾಣಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ, ಕಾಕೋಟುಪರಂಬುವಿನಲ್ಲಿ ನಡೆದ 'ವೆಟ್‌ಲ್ಯಾಂಡ್ ಸ್ಪೋರ್ಟ್ಸ್' ಕಾರ್ಯಕ್ರಮದಲ್ಲಿ ಅವರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಐತಿಹಾಸಿಕ ಹೆಜ್ಜೆ ಇಡಲಾಗಿದೆ.

  ಈ ವಿಶೇಷ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಉತ್ಸಾಹದಿಂದ ಭಾಗವಹಿಸಿದ್ದರು. 
 ರೋಟರಿ ಶಾಲೆಯ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರ ಮತ್ತು ಪ್ರೋತ್ಸಾಹದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದ ಮೂಲಕ, ಪುಟಾಣಿ ಮಕ್ಕಳಿಗೆ ಪ್ರಥಮ ಬಾರಿಗೆ ಪ್ರತ್ಯಕ್ಷವಾಗಿ ಭತ್ತದ ಬೆಳೆ ಬೆಳೆಯುವ ವಿಧಾನ ಹಾಗೂ ಅದರ ಮಹತ್ವದ ಕುರಿತು ಪ್ರಾಯೋಗಿಕ ಅರಿವು ಮೂಡಿಸಲಾಯಿತು.

   ಈ ಸಂದರ್ಭದಲ್ಲಿ ಮುಲ್ಲೇರಾ ಮಧು ಮಂಜುನಾಥ್ ಅವರು ಮಕ್ಕಳೊಂದಿಗೆ ಬೆರೆತು, ಭತ್ತದ ನಾಟಿ ಮಾಡುವ ವಿಧಾನ ಹಾಗೂ ಕೃಷಿ ಪ್ರಕ್ರಿಯೆಯ ಪ್ರತಿಯೊಂದು ಹಂತದ ಕುರಿತು ಮಕ್ಕಳಿಗೆ ಬಹಳ ಆಸಕ್ತಿದಾಯಕವಾಗಿ ಹಾಗೂ ವಿವರವಾಗಿ ತಿಳಿಸಿಕೊಟ್ಟರು. 
ಮಣ್ಣಿನಲ್ಲಿ ಕಾಲಿಟ್ಟು, ನೇಗಿಲು-ನಾಟಿ ಸಂಸ್ಕöÈತಿಯನ್ನು ಕಣ್ಣಾರೆ ಕಂಡು ಅನುಭವಿಸಿದ ಮಕ್ಕಳು ಕೃಷಿಯ ಮಹತ್ವ ಹಾಗೂ ಅನ್ನದಾತ ರೈತರ ಕಷ್ಟ-ಶ್ರಮದ ನಿಜವಾದ ಪರಿಶ್ರಮವನ್ನು ನೇರವಾಗಿ ತಿಳಿದುಕೊಂಡರು.

 ಪುಟಾಣಿ ಮಕ್ಕಳನ್ನು ಇಂತಹ ಕೃಷಿ ಆಧಾರಿತ ಹೊರಾಂಗಣ ಚಟುವಟಿಕೆಗಳಿಗೆ ಕರೆದೊಯ್ದು ಪ್ರಾಯೋಗಿಕ ಜ್ಞಾನ ನೀಡುತ್ತಿರುವುದು ಕೊಡಗು ಜಿಲ್ಲೆಯಲ್ಲಿಯೇ ಇದೇ ಮೊದಲು ಎನ್ನಲಾಗಿದ್ದು, ಪೋಷಕರು, ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳಿಂದ ಈ ಅಪರೂಪದ ಕಾರ್ಯಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.