ಅರ್ಧ ಗಂಟೆ ನೀರಿನಲ್ಲಿ ಮುಳುಗಿ ಕುಳಿತಿದ್ದ ರೌಡಿ - ಗುಳ್ಳೆಗಳಿಂದ ಸಿಕ್ಕಿಬಿದ್ದ!
admincoorgdaily

ಶಿವಮೊಗ್ಗ:
ಮಹಾಭಾರತ ಯುದ್ಧದ ಕೊನೆಯ ದಿನ ಪಾಂಡವರಿಂದ ತಪ್ಪಿಸಿಕೊಳ್ಳಲು ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಿದ್ದ ಕಥೆ ಎಲ್ಲರಿಗೂ ಗೊತ್ತು. ಅದೇ ರೀತಿ ಪೊಲೀಸರಿಂದ ತಪ್ಪಿಸಿಕೊಳ್ಳಲು ರೌಡಿಶೀಟರ್ ಒಬ್ಬ ಕೊಳದ ನೀರಲ್ಲಿ ಅರ್ಧ ಗಂಟೆ ಮುಳುಗಿ ಕುಳಿತ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿಯ ರೌಡಿಶೀಟರ್ ದಿಲೀಪ್ ಅಲಿಯಾಸ್ ಕರಿಯಾ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಳ್ಳದ ನೀರಿನಲ್ಲಿ ಅಡಗಿದ್ದ. ಈತನ ವಿರುದ್ಧ ಕಳ್ಳತನ, ಕೊಲೆ ಯತ್ನ ಸೇರಿ 16 ಪ್ರಕರಣಗಳಿವೆ. ಪ್ರಕರಣ ಒಂದರಲ್ಲಿ ಈತನ ವಿರುದ್ಧ ನ್ಯಾಯಾಲಯದಿಂದ ಮೂರು ಬಾರಿ ವಾರಂಟ್ ಜಾರಿಯಾಗಿತ್ತು. ಹೀಗಾಗಿ ಸೆ.2 ರಂದು ಆತನನ್ನು ಬಂಧಿಸಲು ನ್ಯೂ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ತೆರಳಿದ್ದರು. ಪೊಲೀಸರ ಬರುವಿಕೆ ತಿಳಿದು ದಿಲೀಪ್ ಪರಾರಿಯಾಗಿದ್ದ.
ಭಂಡಾರಹಳ್ಳಿಯ ಹಳ್ಳದ ಬಳಿ ಈತ ಇರುವ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿದ್ದರಿಂದ ಅಲ್ಲಿಗೆ ತೆರಳಿದ್ದರು. ಆದರೆ ಅಲ್ಲೆಲ್ಲೂ ರೌಡಿಶೀಟರ್ ದಿಲೀಪ್ ಕಾಣಿಸಲಿಲ್ಲ. ಹಾಗಾಗಿ ಆತನಿಗಾಗಿ ಹುಡುಕಾಟ ನಡೆಸಿದರು. ಈ ವೇಳೆ ಹಳ್ಳದಲ್ಲಿ ಕಳೆ ಸರಿದಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಅನುಮಾನದಿಂದ ಹಳ್ಳಕ್ಕೆ ಇಳಿದ ನ್ಯೂಟೌನ್ ಠಾಣೆ ಸಬ್ ಇನ್ಸ್‌ಪೆಕ್ಟರ್ ರಮೇಶ್ ಮತ್ತು ಸಿಬ್ಬಂದಿ ಪ್ರಸನ್ನ ಹುಡುಕಾಟ ನಡೆಸಿದರು. ಈ ಸಂದರ್ಭ ನೀರಿನ ಅಡಿಯಿಂದ ಗುಳ್ಳೆ ಬರುವುದನ್ನು ಗಮನಿಸಿದ ಪೊಲೀಸರು ಸುತ್ತುವರೆದು, ರೌಡಿಶೀಟರ್ ದಿಲೀಪ್ ಅಲಿಯಾಸ್ ಕರಿಯಾನನ್ನು ಹಿಡಿದಿದ್ದಾರೆ.
ಹಳ್ಳದಲ್ಲಿಯೇ ಆತನ ಕೈಗೆ ಕೋಳ ತೊಡಿಸಿದ ಪೊಲೀಸರು, ದಂಡೆ ಮೇಲೆ ಕರೆತಂದಿದ್ದಾರೆ. ನ್ಯೂ ಟೌನ್ ಠಾಣೆ ಪೊಲೀಸರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.