ಸೇಕ್ರೆಡ್ ಹಾರ್ಟ್ ಶಾಲೆ ಮತ್ತು ಪದವಿಪೂರ್ವ ಕಾಲೇಜು, ಶನಿವಾರಸಂತೆ ಶಾಲೆಯಲ್ಲಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆ
admincoorgdaily

ಶನಿವಾರಸಂತೆ : ಸೇಕ್ರೆಡ್ ಹಾರ್ಟ್ ಶಾಲೆ ಮತ್ತು ಪದವಿಪೂರ್ವ ಕಾಲೇಜು, ಶನಿವಾರಸಂತೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಶಾಲೆಯ ಪ್ರಾಂಶುಪಾಲರಾದ ರೆವರೆಂಡ್ ಫಾದರ್ ಜಿಬಿ ತೋಮಸ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ನಾಡು, ನುಡಿ, ಭಾಷೆ ಮತ್ತು ಸಂಸ್ಕೃತಿಯ ಮಹತ್ವವನ್ನು ಸಾರಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಫಾದರ್ ಜಿಬಿ ತೋಮಸ್ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕನ್ನಡದ ಸುಂದರ ಗೀತೆಯನ್ನು ಹಾಡಿ ಕನ್ನಡಾಭಿಮಾನವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯಲ್ಲಿ ಬರೋಬ್ಬರಿ 36 ವರ್ಷಗಳ ಕಾಲ ಜೀವಶಾಸ್ತ್ರ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ರೋಹಿಣಿ ಎಂ.ಆರ್. ಅವರು ಮಾತನಾಡಿ, ನಾವು ಎಲ್ಲೇ ಇರಲಿ, ದೇಶದ ಯಾವುದೇ ಭಾಗದಲ್ಲಿರಲಿ ಅಥವಾ ವಿದೇಶದಲ್ಲೇ ನೆಲೆಸಿರಲಿ, ನಮ್ಮ ಕನ್ನಡತನವನ್ನು ಎಂದಿಗೂ ಮರೆಯಬಾರದು. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಪ್ರೀತಿ ಸದಾ ನಮ್ಮಲ್ಲಿ ಜೀವಂತವಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ರೆವರೆಂಡ್ ಫಾದರ್ ಶಿಬಿನ್ ಮ್ಯಾಥ್ಯೂ, ರೆವರೆಂಡ್ ಫಾದರ್ ಜೇಮ್ಸ್ ಹಾಗೂ ಹಿರಿಯ ಕನ್ನಡ ಉಪನ್ಯಾಸಕರಾದ ಗುರುಬಸಪ್ಪ ಉಪಸ್ಥಿತರಿದ್ದರು. ಸಂಸ್ಥೆಯ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕನ್ನಡ ನಾಡು-ನುಡಿಯನ್ನು ಬಿಂಬಿಸುವ ನೃತ್ಯ, ನಾಟಕ, ಭಾಷಣ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆದವು.