Kodagu

ವೀರಾಜಪೇಟೆಯಲ್ಲಿ ನೀರಿನ ಬಾಟಲಿ ಮಾರಾಟ ನಿಷೇಧ

admincoorgdaily

ವೀರಾಜಪೇಟೆಯಲ್ಲಿ ನೀರಿನ ಬಾಟಲಿ ಮಾರಾಟ ನಿಷೇಧ
ವೀರಾಜಪೇಟೆ, ಸೆ. 12: ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ 2 ಲೀಟರ್ ಗಿಂತ ಕಡಿಮೆ ಸಾಮರ್ಥ್ಯದ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆ, ಮಾರಾಟ ಹಾಗೂ ಸಂಗ್ರಹಣೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಂಪೂರ್ಣವಾಗಿ ನಿಷೇಧಿಸಿ ಪುರಸಭೆ ಮುಖ್ಯಾಧಿಕಾರಿ ನಾಚಪ್ಪ ಆದೇಶ ಹೊರಡಿಸಿದ್ದಾರೆ.

ಈಗಾಗಲೇ ಸರ್ಕಾರವು ಪ್ಲಾಸ್ಟಿಕ್ ಕವರ್ ಗಳು, ಇಯರ್ ಬಡ್ಸ್, ಸ್ಟ್ರಾಗಳು, ಕ್ಯಾಂಡಿ ಮತ್ತು ಐಸ್ ಕ್ರೀಂ ಕಡ್ಡಿಗಳು, ಪ್ಲಾಸ್ಟಿಕ್ ಆಧಾರಿತ ಅಲಂಕಾರಿಕ ವಸ್ತುಗಳು, ಪ್ಯಾಕಿಂಗ್ ಸಾಮಗ್ರಿಗಳು ಹಾಗೂ ಆಮಂತ್ರಣ ಪತ್ರಿಕೆಗಳು ಸೇರಿದಂತೆ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಿದೆ.

ಈ ನಿಯಮವನ್ನು ಉಲ್ಲಂಘಿಸಿ ಸಣ್ಣ ಪ್ರಮಾಣದ ನೀರಿನ ಬಾಟಲಿಗಳನ್ನು ಮಾರಾಟ ಮಾಡಿದರೆ ಅಥವಾ ದಾಸ್ತಾನು ಇರಿಸಿಕೊಂಡರೆ ತಪ್ಪಿತಸ್ಥರ ವಿರುದ್ಧ ಭಾರಿ ಮೊತ್ತದ ದಂಡ ವಿಧಿಸುವುದರ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸಾರ್ವಜನಿಕ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.