Kodagu

ಸ್ಕೌಟ್-ಗೈಡ್ಸ್ ಜೀವನ ಮೌಲ್ಯ ಕಲಿಸುತ್ತದೆ: ಜಿಮ್ಮಿ ಸಿಕ್ವೆರಾ

admincoorgdaily

ಸ್ಕೌಟ್-ಗೈಡ್ಸ್ ಜೀವನ ಮೌಲ್ಯ ಕಲಿಸುತ್ತದೆ: ಜಿಮ್ಮಿ ಸಿಕ್ವೆರಾ
ಸೋಮವಾರಪೇಟೆ,: ಸ್ಕೌಟ್ ಮತ್ತು ಗೈಡ್ಸ್ ಸದಾ ಸಿದ್ಧರಾಗಿರಿ ಎಂಬ ಧ್ಯೇಯದೊಂದಿಗೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಹಾಗೂ ಇತರರಿಗೆ ಸಹಾಯ ಮಾಡಲು ಪ್ರಾಮಾಣಿಕತೆ, ಉತ್ತಮ ನಡವಳಿಕೆ, ಪ್ರಕೃತಿ ಪ್ರೀತಿ ಮತ್ತು ಸಾರ್ವಜನಿಕ ಆಸ್ತಿ ರಕ್ಷಣೆಯಂತಹ ಗುಣಗಳನ್ನು ಕಲಿಸುತ್ತದೆ. ಕೇವಲ ಪುಸ್ತಕದ ಅರಿವಲ್ಲ, ಜೀವನ ಮೌಲ್ಯಗಳನ್ನು ಕಲಿಸುವ ಸ್ಕೌಟ್-ಗೈಡ್ಸ್‌ನಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಕಮಿಷನರ್ ಜಿಮ್ಮಿ ಸಿಕ್ವೆರಾ ಕರೆ ನೀಡಿದರು.

ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ತಾಲ್ಲೂಕು ಸ್ಕೌಟ್ ಅಂಡ್ ಗೈಡ್ಸ್ ವಾರ್ಷಿಕ ಮಹಾಸಭೆ ಹಾಗೂ ಗೀತಗಾಯನ ಮತ್ತು ದೇಶಭಕ್ತಿ ಗೀತೆಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ. ವಾಸಂತಿ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಸ್ಪರ್ಧೆಯಲ್ಲಿ ತಾಲ್ಲೂಕಿನ ವಿದ್ಯಾರ್ಥಿಗಳು ಭಾಗವಹಿಸಿದ್ದು, ಮಾದಾಪುರ ಶಾಲೆ ಪ್ರಥಮ ಹಾಗೂ ಸೋಮವಾರಪೇಟೆ ಜಿ.ಎಂ.ಪಿ. ಶಾಲೆ ದ್ವಿತೀಯ ಸ್ಥಾನ ಪಡೆದವು.

ತಾಲ್ಲೂಕು ಸ್ಕೌಟ್ ಮತ್ತು ಗೈಡ್ಸ್ ಅಧ್ಯಕ್ಷ ಎಸ್.ಡಿ. ವಿಜೇತ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಶೀಲಾ ಡಿಸೋಜ, ಜೆ.ಸಿ. ಶೇಖರ್, ಎ.ಪಿ. ವೀರರಾಜ್, ಶುಭ, ಚಂದ್ರಕಲಾ, ವಾಸಂತಿ ರವೀಂದ್ರ, ಗಿರೀಶ್ ಕಾಟ್‌ನಮನೆ ಮತ್ತಿತರರು ಹಾಜರಿದ್ದರು. ಪ್ರಧಾನ ಕಾರ್ಯದರ್ಶಿ ಜ್ಯೋತಿ ಅರುಣ್ ಕಾರ್ಯಕ್ರಮ ನಿರೂಪಿಸಿದರು.