ಚೆಂಬು ಕೂಡಡ್ಕದಲ್ಲಿ ನ.29 ರಂದು ಅರೆಭಾಷೆ ಸಾಹಿತ್ಯ ಸಮ್ಮೇಳನ
admincoorgdaily

ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಸಾಹಿತ್ಯ ಸಮ್ಮೇಳನವು ನವೆಂಬರ್ 29 ರ ಆದಿತ್ಯವಾರದಂದು ಚೆಂಬು ಗ್ರಾಮದ ಕೂಡಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಅರೆಭಾಷೆ ಮತ್ತು ಅರೆಭಾಷೆ ಸಂಸ್ಕೃತಿಯ ಆಚಾರ ವಿಚಾರಗಳು ಮರೆತು ಹೋಗದಂತೆ, ಭಾಷೆಯ ಮೇಲಿನ ಪ್ರೀತಿ ಅಭಿಮಾನ ಹೆಚ್ಚಿಸಿ ಮುಂದಿನ ಪೀಳಿಗೆಗೆ ಭಾಷೆಯನ್ನು ಕೊಂಡೊಯ್ಯುವ ಉದ್ದೇಶದಿಂದ ಅಕಾಡೆಮಿಯು ಈ ಕಾರ್ಯಕ್ರಮವನ್ನು ರೂಪಿಸಿದೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದರು.
ನ.29 ರಂದು ಬೆಳಗ್ಗೆ 8.30 ಗಂಟೆಗೆ ಸಂಪಾಜೆ ಗೇಟ್ ಬಳಿಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೊರಡುವುದರೊಂದಿಗೆ ಉತ್ಸವ ಆರಂಭಗೊಳ್ಳಲಿದೆ. ಪ್ರಗತಿಪರ ಕೃಷಿಕರಾದ ಇಂದಿರಾ ದೇವಿಪ್ರಸಾದ್ ಸಂಪಾಜೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಹಿತಿ ಮತ್ತು ಲೇಖಕಿ ಲೀಲಾ ದಾಮೋದರ ಕುಂದಾಲ್ಪಾಡಿ ಸಮ್ಮೇಳನಾಧ್ಯಕ್ಷರಾಗಿ ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಅಕಾಡೆಮಿ ಪ್ರಕಟಿತ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಜಲಾನಯನ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಸೂರಜ್ ಹೊಸೂರು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.
ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಪ್ರಸ್ತಾವನೆ ಮಾಡಲಿದ್ದು, ಹಿಂದಿನ ಸಮ್ಮೇಳನಾಧ್ಯಕ್ಷ ಭವಾನಿಶಂಕರ ಹೊದ್ದೆಟ್ಟಿ, ಅಕಾಡೆಮಿಯ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 12 ಗಂಟೆಯಿಂದ ವಿಚಾರ ಸಂಕಿರಣ ನಡೆಯಲಿದ್ದು, ‘ಕೃಷಿ ಬದುಕು ಮತ್ತು ಅದರ ಪ್ರಸ್ತುತ ಸವಾಲುಗಳು’ ಎಂಬ ವಿಷಯದ ಕುರಿತು ಕೃಷಿಕ ಸುರೇಶ್ಚಂದ್ರ ಟಿ.ಆರ್. ಹಾಗೂ ‘ಭಾಷೆನ ಮುಂದೆನ ತಲೆಮಾರ್ಗೆ ದಾಟ್ಸುವ ಮಾರ್ಗ’ ಎಂಬ ವಿಷಯದ ಕುರಿತು ಮೇಜರ್ ಡಾ. ಕುಶ್ವಂತ್ ಕೋಳಿಬೈಲ್ ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ 1 ಗಂಟೆಯಿಂದ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮ, ಅಪರಾಹ್ನ 2 ಗಂಟೆಯಿಂದ ಅರೆಭಾಷೆ ಕವಿಗೋಷ್ಠಿ ನಡೆಯಲಿದೆ.
ಕರುಣಾಕರ ನಿಡಿಂಜಿ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದು, ಹಲವು ಕವಿಗಳು ಕವನ ವಾಚನ ಮಾಡಲಿದ್ದಾರೆ ಎಂದು ತಿಳಿಸಿದರು.
ಅಪರಾಹ್ನ 3 ಗಂಟೆಯಿಂದ ಸಮಾರೋಪ ಸಮಾರಂಭ, ಸನ್ಮಾನ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ನಡೆಯಲಿದೆ.
ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಲಿದ್ದು, ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಸಮಾರೋಪದ ಮಾತುಗಳನ್ನಾಡಲಿದ್ದಾರೆ.
ವಿಶ್ರಾಂತ ಪ್ರಾಂಶುಪಾಲ ಮತ್ತು ಲೇಖಕ ಕುಯಿಂತೋಡು ದಾಮೋದರ ಸನ್ಮಾನ ಕಾರ್ಯ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರದೇಶದ ಕೃಷಿ, ವೈದ್ಯಕೀಯ, ಶಿಕ್ಷಣ, ಸಾಂಸ್ಕೃತಿಕ ಮತ್ತು ಸಹಕಾರ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು.ಸಂಜೆ 5 ಗಂಟೆಗೆ ಅರೆಭಾಷೆ ಸಾಂಸ್ಕೃತಿಕ ಸಂಜೆ ನಡೆಯಲಿದ್ದು, ಸ್ಥಳೀಯ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು, ಶಶಿಕಾಂತ್ ಮಿತ್ತೂರು ಅವರ ತಂಡದಿಂದ ಅರೆಭಾಷೆ ಸಿರಿ ಸಂಸ್ಕೃತಿ ನೃತ್ಯರೂಪಕ ಹಾಗೂ ರವಿಚಂದ್ರ ಪೆರುಮುಂಡ ಚೆಂಬು ಮತ್ತು ಬಳಗದವರಿಂದ ‘ಕಾನದ ಮಾಯೆ’ ಅರೆಭಾಷೆ ಯಕ್ಷಗಾನ ನಡೆಯಲಿದೆ.ಸಮ್ಮೇಳನದ ಅಂಗವಾಗಿ ಅರೆಭಾಷೆ ಕವನ, ಗಾದೆ ಬರೆಯುವ, ಮೂಲ ಪದಗಳ ಬರೆಯುವ ಮತ್ತು ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿದ್ದು, ವಾಹನ ಮೆರವಣಿಗೆ, ಪುರಾತನ ಸೊತ್ತುಗಳ ಪ್ರದರ್ಶನ, ತಿಂಡಿ ತಿನಸು, ಹೂವಿನ ಗಿಡ, ಚಿತ್ರ, ಪುಸ್ತಕ, ನೆಟ್ಟಿ ಬಿತ್ತ್, ಬಟ್ಟೆಬರೆ, ಆಟಿಕೆ ಮತ್ತು ಆಭರಣ ಮಳಿಗೆಗಳು ವಿಶೇಷ ಆಕರ್ಷಣೆಯಾಗಿರಲಿವೆ. ಅರೆಭಾಷೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಚಂದ್ರವತಿ ಬಡ್ಡಡ್ಕ, ಚಂದ್ರಶೇಖರ ಪೇರಾಲು, ಲೋಕೇಶ್ ಊರುಬೈಲು, ಸಂದೀಪ್ ಪೂಳಕಂಡ ಮತ್ತು ಮೋಹನ್ ಪೊನ್ನಚನ ಉಪಸ್ಥಿತರಿದ್ದರು.