Kodagu

ಸೆ.18 ರಂದು ಹಿರಿಯ ನಾಗರಿಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

admincoorgdaily

ಸೆ.18 ರಂದು ಹಿರಿಯ ನಾಗರಿಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ಮಡಿಕೇರಿ ಸೆ.09:-ಇದೆ ಅಕ್ಟೋಬರ್ 1 ರಂದು ನಡೆಯಲಿರುವ ವಿಶ್ವ ಹಿರಿಯ ನಾಗರಿಕರ ದಿನಾಚಾರಣೆಯನ್ನು ಸಂಭ್ರಮದಿಂದ ನಡೆಸುವ ಸಲುವಾಗಿ ನಗರದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಯಿತು.
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ, ವಿವಿಧ ಕ್ರೀಡಾಕೂಟಗಳು, ಹಿರಿಯ ನಾಗರಿಕರ ಭಾಗವಹಿಸುವಿಕೆ ಹಾಗೂ ಅಗತ್ಯ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.  

ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಸೆಪ್ಟೆಂಬರ್ 18 ರಂದು ನಗರದ ಗಾಂಧಿ ಮೈದಾನದಲ್ಲಿ ವಿವಿಧ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಹಾಗೆಯೇ ಅಕ್ಟೋಬರ್ 1 ರಂದು ನಗರದ ಬಾಲಭವನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.  

ಅಲ್ಲದೆ ಕಾರ್ಯಕ್ರಮದಲ್ಲಿ ಪ್ರತಿ ತಾಲ್ಲೂಕಿನಿಂದ 5 ಮಂದಿ ಶತಾಯುಷಿಗಳನ್ನು ಗುರುತಿಸಿ ಗೌರವಿಸಲು ನಿರ್ಧರಿಸಲಾಯಿತು.
ಹಿರಿಯ ನಾಗರಿಕರ ಮತ್ತು ವಿಕಲಚೇತರ ಕಲ್ಯಾಣಾಧಿಕಾರಿ ವಿಮಲ ಅವರು ಮಾತನಾಡಿ, ದಿನಾಚರಣೆಯ ಪ್ರಯುಕ್ತ ಈ ಹಿಂದೆ ಹಿರಿಯ ನಾಗರಿಕರಿಗೆ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಕೋರಿದರು. 
ಮುಂದಿನ ದಿನಗಳಲ್ಲಿ ಇಲಾಖೆಗಳಲ್ಲಿ ಹಿರಿಯ ನಾಗರಿಕರ ಕೆಲಸ ಕಾರ್ಯಗಳು ವೇಗವಾಗಿ ನಡೆಸಲು ಇಲಾಖಾಧಿಕಾರಿಗಳಿಗೆ ಜಿಲ್ಲಾ ಮಟ್ಟದ ಕಾರ್ಯಾಗಾರ, ಆರೋಗ್ಯ ತಪಾಸಣೆ ಹಾಗೂ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಕುಂದುಕೊರತೆ ಸಭೆ ನಡೆಸಲು ಕ್ರಮಕೈಗೊಳ್ಳಲಾಗುವುದು ಎಂದರು. 

ಈ ಸಂದರ್ಭ ಹಿರಿಯ ನಾಗರಿಕರು ಮಾತನಾಡಿ, ಹಿರಿಯ ನಾಗರಿಕರ ಅನುಭವ, ಜ್ಞಾನ ಹಾಗೂ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.  
ಸಭೆಯಲ್ಲಿ ವಿರಾಜಪೇಟೆ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಶಂಕರಿ ಪೊನ್ನಪ್ಪ, ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ತಿಮ್ಮಯ್ಯ, ಹಿರಿಯ ನಾಗರಿಕರಾದ ಮಾದಮಯ್ಯ, ಸುಬ್ರಮಣಿ, ವಿಠಲ, ಪಾಲಾಕ್ಷ, ಬಿ.ಕೆ.ನಂಜಪ್ಪ, ವೃದ್ಧಾಶ್ರಮದ ಪ್ರಮುಖರಾದ ಸತೀಶ್, ಚಂದ್ರು, ಹನುಮಂತು ಹಾಗೂ ಸಹಯವಾಣಿ ಕೇಂದ್ರದ ಸಿಬ್ಬಂದಿಗಳು, ಇಲಾಖೆ ಸಿಬ್ಬಂದಿಗಳು ಇದ್ದರು.