ಆನೆಕಾಡು ಬಳಿ ಸರಣಿ ಅಪಘಾತ; ಶಾಸಕ ಮಂತರ್ ಗೌಡರಿಂದ ಸ್ಥಳ ಪರಿಶೀಲನೆ
admincoorgdaily

ಮಡಿಕೇರಿ:ಕುಶಾಲನಗರ-ಮಡಿಕೇರಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಬಳಿ ಹಲವಾರು ಸರಣಿ ಅಪಘಾತಗಳು ಸಂಭವಿಸಿ ಅಮೂಲ್ಯ ಜೀವಗಳು ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇತ್ತೀಚೆಗೆ ಕೆಲವೇ ದಿನಗಳ ಹಿಂದೆ ಸ್ಥಳೀಯ ಯುವಕರು ದುರಾದೃಷ್ಟವಶಾತ್ ಅಪಘಾತದಲ್ಲಿ ಮೃತಪಟ್ಟಿರುವುದು ವಿಷಾದನೀಯವಾಗಿದೆ, ಮನಸ್ಸಿಗೆ ನೋವು ತಂದಿದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಪೊಲೀಸ್ ಇಲಾಖೆ, ಹೆದ್ದಾರಿ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಅಪಘಾತಗಳಿಗೆ ಕಾರಣವಾಗಬಹುದಾದ ಅಪಾಯಕಾರಿಯಾದ ಸ್ಥಳಗಳನ್ನು ಗುರುತಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು ಎಂದು ಅವರು ಹೇಳಿದ್ದಾರೆ.
ಅಪಾಯಕಾರಿಯಾದ ತಿರುವುಗಳು ಹಾಗೂ ಸ್ಥಳಗಳಲ್ಲಿ ಸ್ಪೀಡ್ ಬ್ರೇಕರ್‌ಗಳು, ರಿಫ್ಲೆಕ್ಟರ್‌ಗಳು, ಎಚ್ಚರಿಕೆ ಮತ್ತು ಸೂಚನಾ ಫಲಕಗಳನ್ನು ಅಳವಡಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಅಪಘಾತಗಳಿಗೆ ಕಾರಣವಾಗಿರುವ ಅಂಶಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ತಜ್ಞರ ಸಲಹೆಯೊಂದಿಗೆ ಸೂಕ್ತ ಹಾಗೂ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಸ್ತೆ ಸುರಕ್ಷತೆ ಹಾಗೂ ಅಮೂಲ್ಯ ಜೀವಗಳ ರಕ್ಷಣೆ ನಮ್ಮೆಲ್ಲರ ಆದ್ಯತೆಯಾಗಬೇಕು ಎಂದು ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ.