ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನವೆಂಬರ್ನಲ್ಲಿ ಸರಣಿ ದತ್ತಿ ಕಾರ್ಯಕ್ರಮ
admincoorgdaily

ಮಡಿಕೇರಿ ಅ.30 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನವೆಂಬರ್ ತಿಂಗಳಿನಲ್ಲಿ ಜಿಲ್ಲೆಯ ವಿವಿಧೆಡೆ ಸರಣಿ ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಸಾಹಿತ್ಯ ವಿಚಾರ ಸಂಕಿರಣ, ಗಾಯನ, ಉಪನ್ಯಾಸ ಹಾಗೂ ಕವಿಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನವೆಂಬರ್ 2ರಂದು ಬೆಳಿಗ್ಗೆ 11 ಗಂಟೆಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಹಯೋಗದಲ್ಲಿ ನಾ. ಡಿಸೋಜಾ ಮಕ್ಕಳ ಸಾಹಿತ್ಯ ಪುರಸ್ಕಾರ ದತ್ತಿ ಕಾರ್ಯಕ್ರಮ ನಡೆಯಲಿದೆ. ಈ ಪ್ರಯುಕ್ತ ಆಯೋಜಿಸಲಾಗಿದ್ದ ನೃತ್ಯ ಮತ್ತು ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದರು.
ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಫೀ.ಮಾ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ.ಮೇಜರ್ ರಾಘವ ಉದ್ಘಾಟಿಸಲಿದ್ದಾರೆ. ನಾ.ಡಿಸೋಜಾ ಅವರ ಸಾಹಿತ್ಯದ ಕುರಿತು ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಪ್ರಮುಖರಾದ ಟಿ.ಜೆ.ಪ್ರೇಮ್ ಕುಮಾರ್, ಡಾ.ಕೆ.ಎನ್.ಗಾಯತ್ರಿ, ಕಡ್ಲೇರ ತುಳಸಿ ಮೋಹನ್ ಹಾಗೂ ರೇವತಿ ರಮೇಶ್ ಉಪಸ್ಥಿತರಿರುವರು.
ಅದೇ ದಿನ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅರಮೇರಿ ಕಳಂಚೇರಿ ಮಠದ ಎಸ್.ಎಂ.ಎಸ್. ವಿದ್ಯಾಪೀಠದ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ಸುಲೋಚನಾ ಮತ್ತು ಡಾ. ಎಂ.ಜಿ. ನಾಗರಾಜ್ ದಂಪತಿ ದತ್ತಿ ಹಾಗೂ ಮಹಾಶರಣ ಲಿಂಗೈಕ್ಯ ಮಾಗನೂರು ಬಸಪ್ಪ ದತ್ತಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ವಿಚಾರ ಸಂಕಿರಣ, ಗಾಯನ ಹಾಗೂ ಉಪನ್ಯಾಸಗಳು ನಡೆಯಲಿವೆ. ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಉದ್ಘಾಟಿಸಲಿದ್ದಾರೆ. ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಟಿ.ಪಿ.ರಮೇಶ್ ಅವರು ಆಶಯ ನುಡಿಗಳನ್ನಾಡಲಿದ್ದಾರೆ.
ಜಿಲ್ಲೆಯ ಹಿರಿಯ ಗಾಯಕಿ ಚೇಂದಿರ ನಿರ್ಮಲ ಬೋಪಣ್ಣ ದಾಸರ ಪದ ಹಾಗೂ ವಚನ ಗೀತೆಗಳನ್ನು ಹಾಡಲಿದ್ದಾರೆ.
ವಚನ ಸಾಹಿತ್ಯದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳು ವಿಷಯವಾಗಿ ಬೆಂಗಳೂರಿನ ಎಸ್.ಜೆ.ಆರ್. ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮ ಸಿದ್ದರಾಜು ಹಾಗೂ ಹರಿದಾಸ ಸಾಹಿತ್ಯ ಅಂದು-ಇಂದು ವಿಷಯವಾಗಿ ಬೆಂಗಳೂರಿನ ವಿಜಯ ಕಾಲೇಜಿನ ಪ್ರಾಧ್ಯಾಪಕ ಡಾ. ಆರ್. ವಾದಿರಾಜು ಉಪನ್ಯಾಸ ನೀಡಲಿದ್ದಾರೆ. ಹರಿದಾಸ ಅಪ್ಪಚ್ಚ ಕವಿ ಅವರಲ್ಲಿ ದಾಸ ಸಾಹಿತ್ಯದ ನಿಲುವು ಕುರಿತು ತೂಕಬೊಳಕ್ ಸಂಪಾದಕ ಮುಲ್ಲೆಂಗಡ ಮಧೋಶ್ ಪೂವಯ್ಯ ಮಾತನಾಡಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹೆಬ್ಬಾಲೆಯ ಶಿಕ್ಷಕ ಮೇ.ನಾ. ವೆಂಕಟ ನಾಯಕ್ ಹಾಗೂ ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿ.ವಿ.ಶಿವಪ್ಪ ಉಪನ್ಯಾಸ ನೀಡಲಿದ್ದಾರೆ. ಹಿರಿಯ ಸಾಹಿತಿ ಹಾಗೂ ಸಂಶೋಧಕ ಡಾ.ಎಂ.ಜಿ.ನಾಗರಾಜ್ ಸಮಾರೋಪ ಭಾಷಣ ಮಾಡಲಿದ್ದಾರೆ.
ನ.4ರಂದು ಎರಡು ದತ್ತಿ ಕಾರ್ಯಕ್ರಮ;
ನ.4ರಂದು ಗೋಣಿಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ಎಂ.ಜಿ.ಪದ್ಮನಾಭ ಕಾಮತ್ ಮತ್ತು ಸೀತಾಬಾಯಿ ಹಾಗೂ ರಾಮಚಂದ್ರ ಕಾಮತ್ ದತ್ತಿ ಕಾರ್ಯಕ್ರಮ ನಡೆಯಲಿದೆ.
ಜಿಲ್ಲೆಯಲ್ಲಿ ವಾಣಿಜ್ಯೋದ್ಯಮಿಯಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಹಿರಿಯರನ್ನು ಗುರುತಿಸಿ ಅವರ ಕುರಿತು ಉಪನ್ಯಾಸ ನೀಡುವುದು ಈ ದತ್ತಿಯ ಉದ್ದೇಶವಾಗಿದೆ. ಅಲ್ಲದೆ, 2025-26ನೇ ಸಾಲಿನಲ್ಲಿ ಪದವಿಪೂರ್ವ ಕಾಲೇಜಿನ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶನಿವಾರಸಂತೆಯ ಭಾರತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಫಾತಿಮಾ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ವಹಿಸಲಿದ್ದು, ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಭವನದ ಕಾರ್ಯದರ್ಶಿ ಕೊಳ್ಳಿಮಾಡ ಅಜಿತಾ ಅಯ್ಯಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ, ಕೋಳೆರ ದಯಾ ಚಂಗಪ್ಪ, ದತ್ತಿದಾನಿಗಳಾದ ಎಂ.ಪಿ.ಪ್ರಮೋದ್ ಕಾಮತ್, ನಾಗೇಂದ್ರ ಕಾಮತ್ ಹಾಗೂ ರಾಜಾರಾವ್ ಭಾಗವಹಿಸಲಿದ್ದಾರೆ.
ಅಂದು ಮಧ್ಯಾಹ್ನ 2 ಗಂಟೆಗೆ ಪೊನ್ನಂಪೇಟೆಯ ಸಾಯಿಶಂಕರ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಕೈಬುಲಿರ ಬೋಪಯ್ಯ ಜ್ಞಾಪಕಾರ್ಥ ದತ್ತಿನಿಧಿ ಮತ್ತು ದಿ. ಗಂಗಾಧರ್ ಶೇಟ್ ಸುಲೋಚನಾ ಬಾಯಿ ದತ್ತಿನಿಧಿ ಕಾರ್ಯಕ್ರಮ ನಡೆಯಲಿದೆ.
2025ರಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶ್ರೀ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಎಚ್.ಕೆ. ನವ್ಯ ಅವರನ್ನು ಸನ್ಮಾನಿಸಲಾಗುವುದು. ಕೊಡಗು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಉಪನ್ಯಾಸ ಕಾರ್ಯಕ್ರಮವೂ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ವಹಿಸಲಿದ್ದು, ಸಾಯಿಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಝರು ಗಣಪತಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕುಲ್ಲಚಂಡ ಪ್ರಮೋದ್ ಗಣಪತಿ, ಬಾನಂಗಡ ಅರುಣ್ ಹಾಗೂ ಉಳುವಂಗಡ ಕಾವೇರಿ ಉದಯ್ ಭಾಗವಹಿಸಲಿದ್ದಾರೆ.
ನವೆಂಬರ್ 5ರಂದು ಬೆಳಿಗ್ಗೆ 11 ಗಂಟೆಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ದಿ. ಕೈಬುಲಿರ ಬೋಪಯ್ಯ ದತ್ತಿನಿಧಿ ಹಾಗೂ ಜೆ.ಸಿ. ಶೇಖರ್-ಜಲಜಾ ಶೇಖರ್ ದತ್ತಿ ಕಾರ್ಯಕ್ರಮ ನಡೆಯಲಿದೆ.
ಕೊಡಗು ಜಿಲ್ಲೆಯ ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ, ಕವಿಗೋಷ್ಠಿ ಹಾಗೂ ವಚನ ಸಾಹಿತ್ಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ರಾಜೇಶ್ ಪದ್ಮನಾಭ ವಹಿಸಲಿದ್ದು, ಎಂ.ಪಿ.ಕೇಶವ ಕಾಮತ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೋರನ ಸರಸ್ವತಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಟಿ.ಪಿ.ರಮೇಶ್, ಕೈಬುಲಿರ ಪಾರ್ವತಿ ಬೋಪಯ್ಯ, ಜಲಜಾ ಶೇಖರ್ ಹಾಗೂ ಜೆ.ಸಿ.ಶೇಖರ್ ಉಪಸ್ಥಿತರಿರಲಿದ್ದಾರೆ.
ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಈ ಸರಣಿ ದತ್ತಿ ಕಾರ್ಯಕ್ರಮಗಳ ಮೂಲಕ ಸಾಹಿತ್ಯ, ಸಂಸ್ಕೃತಿ, ವಚನ ಮತ್ತು ದಾಸ ಸಾಹಿತ್ಯದ ಅರಿವು ಮೂಡಿಸುವುದರೊಂದಿಗೆ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುವುದು ಎಂದು ಎಂ.ಪಿ.ಕೇಶವ ಕಾಮತ್ ತಿಳಿಸಿದರು.
ನ.23 ರಂದು ನನ್ನ ಐದು ವರ್ಷಗಳ ಅಧಿಕಾರವಧಿ ಪೂರ್ಣಗೊಳ್ಳಲಿದ್ದು, ಉಳಿದಿರುವ 6 ದತ್ತಿ ಕಾರ್ಯಕ್ರಮಗಳನ್ನು ನ.10 ರೊಳಗೆ ಆಯೋಜಿಸಲಾಗುವುದು ಎಂದರು.
ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಮಾತನಾಡಿ ಕೇಶವ ಕಾಮತ್ ಅವರು ಅಧ್ಯಕ್ಷರಾಗುವ ಮೊದಲು 20 ದತ್ತಿನಿಧಿಗಳಿದ್ದವು, ಇವರ ಅಧಿಕಾರವಧಿಯಲ್ಲಿ 25 ದತ್ತಿನಿಧಿ ಸೇರ್ಪಡೆಗೊಂಡಿದ್ದು, ಒಟ್ಟು 45 ದತ್ತಿನಿಧಿಗಳಿವೆ. ಇದು ಕೊಡಗಿನ ಕಸಾಪ ಇತಿಹಾಸದಲ್ಲಿ ದಾಖಲೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಸಾಹಿತ್ಯ ಪ್ರಪಂಚವನ್ನು ಪರಿಚಯಿಸಲು ಹಾಗೂ ಯುವ ಸಮೂಹಕ್ಕೆ ಸಾಹಿತ್ಯದ ಕುರಿತು ಪ್ರೇರಣೆ ನೀಡಲು ದತ್ತಿನಿಧಿ ಸ್ಥಾಪನೆಗೆ ದಾನಿಗಳು ಮುಂದಾಗಬೇಕೆಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಹಾಗೂ ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್ ಉಪಸ್ಥಿತರಿದ್ದರು.