Kodagu

ಕಾಡಾನೆ ದಾಳಿಯಿಂದ ಸರಣಿ ಸಾವು : ಕಾಡಾನೆಗಳ ಸ್ಥಳಾಂತರಕ್ಕೆ ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ

admincoorgdaily

ಕಾಡಾನೆ ದಾಳಿಯಿಂದ ಸರಣಿ ಸಾವು : ಕಾಡಾನೆಗಳ ಸ್ಥಳಾಂತರಕ್ಕೆ ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ
ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ನಿರಂತರವಾಗಿದ್ದು, ಅಮಾಯಕರ ಜೀವಬಲಿಯಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿರುವ ಕಾಡಾನೆಗಳನ್ನು ಕೊಡಗು ಜಿಲ್ಲೆಯಿಂದ ತಕ್ಷಣ ಸ್ಥಳಾಂತರಿಸಿ, ಜನರ ಜೀವ ರಕ್ಷಣೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯಿಸಿದ್ದಾರೆ. 

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗಿನ ಜನವಸತಿ ಪ್ರದೇಶಗಳು, ಕಾಫಿ ತೋಟಗಳು ಹಾಗೂ ಕೃಷಿ ಭೂಮಿಗಳಲ್ಲಿ ಕಾಡಾನೆಗಳ ಸಂಚಾರದಿAದ ಜನರು ಆತಂಕದಲ್ಲಿ ಬದುಕುವಂತಾಗಿದೆ. ಕಾಡಾನೆ ದಾಳಿಯಿಂದ ಸರಣಿ ಸಾವುಗಳು ಸಂಭವಿಸುತ್ತಿವೆ. ಕೆಲವು ದಿನಗಳ ಹಿಂದೆ ಕಾಫಿ ಬೆಳೆಗಾರರೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಘಟನೆ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

 ಕಾಡಾನೆಗಳ ಸಂಚಾರದಿಂದ ತೋಟಗಳಿಗೆ ತೆರಳಲು ಬೆಳೆಗಾರರು ಹಾಗೂ ಕಾರ್ಮಿಕರು ಭಯಪಡುವಂತಾಗಿದೆ. ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗುವುದರ ಜೊತೆಗೆ ಬೆಳೆ ನಾಶ, ಆಸ್ತಿ ಹಾನಿ ಹಾಗೂ ಮಾನವ ಜೀವಹಾನಿ ನಿರಂತರವಾಗಿ ಸಂಭವಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಡಾನೆಗಳ ದಾಳಿಯನ್ನು ತಡೆಯಲು ಅರಣ್ಯ ಇಲಾಖೆ ಕೈಗೊಳ್ಳುತ್ತಿರುವ ಕ್ರಮಗಳು ಸಮರ್ಪಕವಾಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಕಾಡಾನೆಗಳ ಚಲನವಲನದ ಬಗ್ಗೆ ಮುಂಚಿತ ಮಾಹಿತಿ ನೀಡುವುದು, ತ್ವರಿತ ಕಾರ್ಯಾಚರಣೆ ನಡೆಸುವುದು ಹಾಗೂ ಅಪಾಯಕಾರಿ ಪ್ರದೇಶಗಳಲ್ಲಿ ಜನರ ಸುರಕ್ಷತೆಗೆ ವಿಶೇಷ ವ್ಯವಸ್ಥೆ ಕಲ್ಪಿಸುವುದು ಅತ್ಯಗತ್ಯವಾಗಿದೆ.
ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಜನವಸತಿ ಪ್ರದೇಶಗಳು ಹಾಗೂ ಕೃಷಿ ತೋಟಗಳಲ್ಲಿ ನಿರಂತರವಾಗಿ ಸಂಚರಿಸುತ್ತಿರುವ ಕಾಡಾನೆಗಳನ್ನು ಗುರುತಿಸಿ, ಅವುಗಳನ್ನು ಸುರಕ್ಷಿತ ಅರಣ್ಯ ಪ್ರದೇಶಗಳಿಗೆ ತಕ್ಷಣ ಸ್ಥಳಾಂತರಿಸಬೇಕು. ಜನರ ಜೀವಕ್ಕೆ ಅಪಾಯ ಉಂಟುಮಾಡುವ ಕಾಡಾನೆಗಳ ಬಗ್ಗೆ ಅರಣ್ಯ ಇಲಾಖೆ ವಿಶೇಷ ಗಮನಹರಿಸಬೇಕು.

ಕಾಡಾನೆಗಳ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ರೂಪಿಸಬೇಕು. ಕಾಡಾನೆಗಳ ಸಂಚಾರವನ್ನು ನಿಯಂತ್ರಿಸಲು ರೈಲು ಹಳಿ ತಡೆಗೋಡೆ, ಸೋಲಾರ್ ಬೇಲಿ, ಕಂದಕಗಳ ದುರಸ್ತಿ ಹಾಗೂ ತ್ವರಿತ ಪ್ರತಿಕ್ರಿಯಾ ತಂಡಗಳನ್ನು ಬಲಪಡಿಸಬೇಕು.

ಜನರ ಜೀವ ರಕ್ಷಣೆಗೆ ಸರ್ಕಾರ ಮತ್ತು ಅರಣ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ಕಾಡಾನೆಗಳ ದಾಳಿಯಿಂದ ಕೊಡಗಿನ ಜನರು ಮತ್ತಷ್ಟು ಬಲಿಯಾಗುವ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತೇಲಪಂಡ ಶಿವಕುಮಾರ್ ನಾಣಯ್ಯ ಆಗ್ರಹಿಸಿದ್ದಾರೆ.

ಕೊಡಗಿನಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚಾಗಿದ್ದು, ಅರಣ್ಯ ಪ್ರದೇಶದಿಂದ ಹೊರಬಂದು ತೋಟಗಳು ಹಾಗೂ ಗ್ರಾಮಗಳೊಳಗೆ ಸಂಚರಿಸುತ್ತಿವೆ. ಇದರಿಂದ ಬೆಳೆಗಾರರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಜನರು ಪ್ರತಿನಿತ್ಯ ಜೀವಭಯದಲ್ಲೇ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆ ದಾಳಿಗೆ ಅಮಾಯಕರು ಬಲಿಯಾಗುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಮಾನವ—ಕಾಡಾನೆ ಸಂಘರ್ಷದ ತೀವ್ರತೆಯನ್ನು ಅಂಕಿ ಅಂಶಗಳೇ ಸ್ಪಷ್ಟಪಡಿಸುತ್ತಿವೆ. ಈ ವರ್ಷವೊಂದರಲ್ಲೇ ಕೊಡಗಿನಲ್ಲಿ ಕಾಡಾನೆ ದಾಳಿಗೆ 9 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಮಾನವ ಜೀವಹಾನಿಯ ಜೊತೆಗೆ ಕಾಡಾನೆಗಳ ಸಾವಿನ ಸಂಖ್ಯೆಯೂ ಆತಂಕಕಾರಿಯಾಗಿದೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವರದಿಯ ಪ್ರಕಾರ, 2014ರಿಂದ 2025ರವರೆಗೆ ಕೊಡಗಿನಲ್ಲಿ ಕಾಡಾನೆ ದಾಳಿಯಿಂದ 70 ಮಾನವ ಜೀವಹಾನಿಗಳು ಸಂಭವಿಸಿವೆ. ಈ ಘಟನೆಗಳಲ್ಲಿ ಶೇ.90ಕ್ಕೂ ಹೆಚ್ಚು ಮಂದಿ ಕಾಡಾನೆಗಳ ಇರುವಿಕೆಯ ಬಗ್ಗೆ ಅರಿವಿಲ್ಲದಿದ್ದಾಗ ದಾಳಿಗೆ ಸಿಲುಕಿರುವುದು ಗಮನಾರ್ಹವಾಗಿದೆ ಎಂದು ಶಿವಕುಮಾರ್ ನಾಣಯ್ಯ ಗಮನ ಸೆಳೆದಿದ್ದಾರೆ.