ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗಳದಲ್ಲಿ ಶಾರದ ಪೂಜೆ
admincoorgdaily

ವಿರಾಜಪೇಟೆ:ಸಮೀಪದ ಹೆಗ್ಗಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಹೆಗ್ಗಳ ಗ್ರಾಮದ ಅರ್ಚಕರಾದ ವಾಮನ ಮೂರ್ತಿ ಭಟ್ ರವರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಹೂವಿನ ಅಲಂಕೃತ ಮಂಟಪದಲ್ಲಿ ಶ್ರೀ ಮಹಾಗಣಪತಿ ಹಾಗೂ ಶ್ರೀ ಸರಸ್ವತಿ ದೇವಿಯ ಫೋಟೋಗಳನ್ನು ಪ್ರತಿಷ್ಠಾಪನೆ ಮಾಡುವುದರ ಮೂಲಕ ಪೂಜಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮೊದಲಿಗೆ ಅರ್ಚಕರು ಶ್ರೀ ಗಣಪತಿ ಪೂಜೆಯನ್ನು ನೆರವೇರಿಸಿದರು. ತದನಂತರ ಸಂಕಲ್ಪವನ್ನು ಮಾಡಿದರು.
ಪುಷ್ಪಾರ್ಚನೆ, ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ ಮುಂತಾದ ಸೇವೆಗಳನ್ನು ನೆರವೇರಿಸಲಾಯಿತು.
ನೈವೇದ್ಯವನ್ನು ಸಮರ್ಪಿಸಿ ಪೂಜೆಯನ್ನು ಸಲ್ಲಿಸಲಾಯಿತು. ತದನಂತರ ಮಹಾ ಮಂಗಳಾರತಿಯನ್ನು ಅರ್ಚಕರು ನೆರವೇರಿಸಿದರು. ಅರ್ಚಕರು ಈ ಸಂದರ್ಭದಲ್ಲಿ ಶಾಲೆ ಹಾಗೂ ಶಿಕ್ಷಕರ ಆರೋಗ್ಯ, ಶಾಲೆಯ ಶೈಕ್ಷಣಿಕ ಪ್ರಗತಿ ಕುರಿತು ಪ್ರಾರ್ಥನೆಯನ್ನು ಮಾಡಿದರು.
ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶ್ರೀ ಸರಸ್ವತಿ ಮಾತೆಗೆ ಹಾಗೂ ಗಣಪತಿ ದೇವರಿಗೆ ನಮಿಸಿದರು. ತದನಂತರ ಪ್ರಸಾದ ವಿತರಣೆಯು ಜರುಗಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸುಜಾತ, ಎಸ್ ಡಿ ಎಂ ಸಿ ಅಧ್ಯಕ್ಷೆ ರೋಹಿಣಿ, ಸಹ ಶಿಕ್ಷಕರು ,ಎಸ್ ಡಿ ಎಮ್ ಸಿ ಸದಸ್ಯರುಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.