ಕುಟುಂಬಗಳ ಬಾಂಧವ್ಯಕ್ಕೆ ಶೂಟಿಂಗ್ ಸಡಗರ: ಅ.10-11ರಂದು ಪೊನ್ನಂಪೇಟೆಯಲ್ಲಿ ಅಲೆಮಾಡ ತೋಕ್ ನಮ್ಮೆ-2026’
admincoorgdaily

ಮಡಿಕೇರಿ: ಕೊಡವ ಸಮುದಾಯದ ಪರಂಪರೆ, ಶೌರ್ಯ ಮತ್ತು ಒಗ್ಗಟ್ಟನ್ನು ಸಂಭ್ರಮಿಸುವ ಅಲೆಮಾಡ ತೋಕ್ ನಮ್ಮೆ ೨೦೨೬-ಅಂತರ ಕೊಡವ ಕುಟುಂಬಗಳ ಶೂಟಿಂಗ್ ಸ್ಪರ್ಧೆ ಅ.೧೦ ಮತ್ತು ೧೧ರಂದು ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಆಲೆಮಾಡ ತೋಕ್ ನಮ್ಮೆಯ ನಿರ್ದೇಶಕ ಕೀರ್ತನ್ ತಮ್ಮಯ್ಯ ತಿಳಿಸಿದ್ದಾರೆ.
ನೋಂದಾಯಿತ ಸಂಸ್ಥೆಯಾದ ಕೊಡವ ಮಾರ್ಕ್ಸ್‌ಮನ್ ಅಸೋಸಿಯೇಷನ್ ಆಶ್ರಯದಲ್ಲಿ ಸ್ಪರ್ಧೆಯನ್ನು ಆಯೋಜಿಸಿದೆ. ೨೦೫ ಕುಟುಂಬಗಳ ೩೭೯ ತಂಡಗಳು ಸೇರಿದಂತೆ ಒಟ್ಟು ೭೫೮ ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದಾರೆ. ಸ್ಪರ್ಧೆಯನ್ನು ನಾಲ್ಕು ಗುಂಪುಗಳಲ್ಲಿ ನಡೆಸಲಾಗುವುದು. ಪ್ರತಿ ಗುಂಪಿನಿಂದ ಅಗ್ರಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದ್ದು, ನಂತರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
ಉದ್ಘಾಟನಾ ಸಮಾರಂಭ: ಅ.೧೦ರ ಬೆಳಗ್ಗೆ ೧೧ ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಕೆ.ಎಸ್.ಎಸ್.ಎ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು.ನಾಚಪ್ಪ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ನಾಲ್ವರು ಸಾಧಕರಿಗೆ ಸನ್ಮಾನ ನೆರವೇರಿಸಲಾಗುವುದು. ಅ.೧೧ರ ಸಂಜೆ ೫ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಮಾಜಿ ಭಾರತೀಯ ಹಾಕಿ ಆಟಗಾರ ಹಾಗೂ ಒಲಿಂಪಿಯನ್ ಚೆಪ್ಪುಡೀರ ಎಸ್.ಪೂಣಚ್ಚ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆಲೆಮಾಡ ಕುಟುಂಬದ ಅಧ್ಯಕ್ಷ ದೇವಯ್ಯ, ಉಪಾಧ್ಯಕ್ಷ ಎ.ಮುತ್ತಪ್ಪ, ಪ್ರಮುಖರಾದ ಎ.ಸೋಮಣ್ಣ, ಉಪಾಧ್ಯಕ್ಷ ಎ.ಸುದೀರ್ ಉಪಸ್ಥಿತರಿದ್ದರು.