Kodagu

ಸಿದ್ದಾಪುರ;ಸೈಬರ್ ವಂಚನೆ,15 ದಿನಗಳಲ್ಲಿ 3 ಪ್ರಕರಣಗಳು ಬೆಳಕಿಗೆ: ರೂ 3.32 ಲಕ್ಷ ವಂಚನೆ

admincoorgdaily

ಸಿದ್ದಾಪುರ;ಸೈಬರ್ ವಂಚನೆ,15 ದಿನಗಳಲ್ಲಿ 3 ಪ್ರಕರಣಗಳು ಬೆಳಕಿಗೆ: ರೂ 3.32 ಲಕ್ಷ ವಂಚನೆ
ಸಿದ್ದಾಪುರ: ಸಾಮಾಜಿಕ ಜಾಲತಾಣವನ್ನು ದುರುಪಯೋಗ ಮಾಡಿಕೊಂಡು ಬ್ಯಾಂಕ್ ಖಾತೆ ಹೊಂದಿರುವವರನ್ನು ವಂಚಿಸುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಕಳೆದ 15 ದಿನಗಳ ಅಂತರದಲ್ಲಿ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ರೂ 3,32,000 ಹಣವನ್ನು ಸೈಬರ್ ಕದೀಮರು ದೋಚಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಆರ್.ಟಿ.ಓ ಚಲನ್ ಹೆಸರಿನಲ್ಲಿ ಎಪಿಕೆ ಫೈಲನ್ನು ವ್ಯಾಪಕವಾಗಿ ಬಳಸುತ್ತಿರುವ ಸೈಬರ್ ಖದೀಮರು ಜನಸಾಮಾನ್ಯರನ್ನು ವಂಚನೆ ಮಾಡುತ್ತಿದ್ದಾರೆ.

ಕೆಲವು ಪ್ರಕರಣಗಳಲ್ಲಿ ಮಾತ್ರ ದೂರು ದಾಖಲಾಗುತ್ತಿರುವುದರಿಂದ ಬಹಿರಂಗವಾಗುತ್ತಿದ್ದು, ಕೆಲವರು ಹಣ ಕಳೆದುಕೊಂಡಿರುವ ಬಗ್ಗೆ ಮಾಹಿತಿ ಹಾಗೂ ದೂರು ನೀಡದೆ ಇರುವುದರಿಂದ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲವೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹೆಚ್ಚುತ್ತಿರುವ ಸೈಬರ್ ವಂಚನೆ;

ಸಿದ್ದಾಪುರದ ಬಟ್ಟೆ ಅಂಗಡಿ ಮಾಲೀಕನ ರೂ 1.27 ಲಕ್ಷ, ಮೈಸೂರು ರಸ್ತೆಯ ಚಾಲಕರೊಬ್ಬರ 1.05 ಲಕ್ಷ ಮತ್ತು 20.10.2026 ರಂದು ನೆಲ್ಲಿಹುದಿಕೇರಿಯ ಟಿಂಬರ್ ವ್ಯಾಪಾರಿಯ ರೂ 1 ಲಕ್ಷ ಸೇರಿ ರೂ 3.32 ಲಕ್ಷ ಹಣ ಕಳೆದುಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.


RTO CHALLAN ಹೆಸರಿನ APK ಫೈಲ್ ಬಗ್ಗೆ ಎಚ್ಚರ:

ಮೊಬೈಲ್‌ಗೆ APK ಫೈಲ್ ಬಂದರೆ ಅದನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್ ಮಾಡಬೇಡಿ, ಓಪನ್ ಮಾಡಬೇಡಿ. ಫೈಲ್ ಹೆಸರು ಏನೇ ಇದ್ದರೂ, ಕೊನೆಯಲ್ಲಿ .apk ಎಂದು ಇದ್ದರೆ ಕೂಡಲೇ ಡಿಲೀಟ್ ಮಾಡಿ. ಹೀಗೆ ವಿವಿಧ ಹೆಸರಿನಲ್ಲಿ ವೈರಸ್ ಫೈಲ್ ಬರಬಹುದು. ಎಚ್ಚರಿಕೆ ವಹಿಸಿ ಎಂದು ಸಿದ್ದಾಪುರದ ಆರಕ್ಷಕ ಉಪ ನಿರೀಕ್ಷಕ ಕೆ. ಮಂಜುನಾಥ್ ಅವರು ತಿಳಿಸಿದ್ದಾರೆ. ಸುರಕ್ಷತೆಗಾಗಿ ಪ್ಲೇ ಸ್ಟೋರ್‌ನಲ್ಲಿರುವ M-Kavach 2 ಆಪ್ ಬಳಸುವಂತೆ ಅವರು ಮನವಿ ಮಾಡಿದ್ದಾರೆ.