ಸಿದ್ದಾಪುರ;ಹಬ್ಬದ ಖುಷಿಯಲ್ಲಿ ಮನೆಗೆ ಬರುವಾಗಲೇ ಕರಾಳ ರಾತ್ರಿಯಾಯ್ತು:ಒಂದೇ ಕುಟುಂಬದ ಮೂವರ ದುರಂತ ಅಂತ್ಯ
admincoorgdaily

ಸಿದ್ದಾಪುರ;
ಹಬ್ಬದ ದಿನಗಳಲ್ಲಿ ಮನೆಗೆ ತಲುಪಬೇಕಿದ್ದ ಇಡೀ ಕುಟುಂಬವೇ ಹೀಗೆ ಕ್ರೂರ ವಿಧಿಯ ಆಟಕ್ಕೆ ಬಲಿಯಾಗಿರುವುದು ಇಡೀ ಗ್ರಾಮದಲ್ಲಿ ತೀವ್ರ ಶೋಕ ಹಾಗೂ ನೀರವ ಮೌನವನ್ನು ಆವರಿಸುವಂತೆ ಮಾಡಿದೆ.
ಸಿದ್ದಾಪುರ ಸಮೀಪದ ಬಾಣಂಗಾಲ ಗ್ರಾಮದಲ್ಲಿ ಕಾರೊಂದು ಕೆರೆಗೆ ಬಿದ್ದು, ದಂಪತಿ ಹಾಗೂ ನಾಲ್ಕು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ಬುಧವಾರ ಬೆಳಿಗ್ಗೆ ನಡೆದಿತ್ತು.
ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ ಗ್ರಾಮದ ಹೈಸ್ಕೂಲ್ ಪೈಸಾರಿ ನಿವಾಸಿಗಳಾದ ವಿಜೇಶ್ (36) ಪತ್ನಿ ಮೂಲತಃ ವಿರಾಜಪೇಟೆಯ ಪಮಿತ (34) ಹಾಗೂ ಪುತ್ರಿ ಲಿಯಾ (4) ಮೃತ ದುರ್ದೈವಿಗಳು.
ಸಿದ್ದಾಪುರ ಸಮೀಪದ ತೋಟವೊಂದರಲ್ಲಿ ಸಹಾಯಕ ಕ್ಷೇತ್ರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜೇಶ್, ವಿಜಯದಶಮಿ ಅಂಗವಾಗಿ ಮಂಗಳವಾರ ಸಿದ್ದಾಪುರಕ್ಕೆ ತೆರಳಿದ್ದರು. ತನ್ನ ತಮ್ಮನ ಮನೆಯಲ್ಲಿ ಹಿರಿಯ ಮಗಳನ್ನು ಬಿಟ್ಟು ರಾತ್ರಿ ಸಿದ್ದಾಪುರದಿಂದ ಬಾಣಂಗಾಲದ ಎಲ್ಕ್ ಹಿಲ್ ತೋಟದ ಮನೆಗೆ ಕಾರಿನಲ್ಲಿ ತೆರಳಿದ್ದರು.
ಇನ್ನೇನು ಕೇವಲ 100 ಮೀಟರ್ ಅಂತರದಲ್ಲಿ ಮನೆ ಇತ್ತು. ಮನೆ ತಲುಪಿತು ಎನ್ನುವಷ್ಟರಲ್ಲಿ ಕಾರು ನಿಯಂತ್ರಣ ತಪ್ಪಿ ಸಮೀಪದ ಕೆರೆಗೆ ಮುಗುಚಿ ಬಿದ್ದಿದೆ ಎನ್ನಲಾಗಿದೆ. ಬುಧವಾರ ಬೆಳಿಗ್ಗೆ ತೋಟದ ಕಾರ್ಮಿಕರು ಕೆರೆಯಲ್ಲಿ ಕಾರು ಮುಳುಗಿರುವುದನ್ನು ಗಮನಿಸಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಂದೆ ತಾಯಿಯೊಂದಿಗೆ ಬಾಳಿ ಬದುಕಬೇಕಾಗಿದ್ದ ನಾಲ್ಕು ವರ್ಷದ ಪುಟ್ಟ ಬಾಲಕಿ, ತಂದೆ ತಾಯಿಯ ಜೊತೆಯಲ್ಲೇ ಇಹಲೋಕ ತ್ಯಜಿಸಿದ್ದಾಳೆ. ಮತ್ತೊಂದೆಡೆ ಚಿಕ್ಕಪ್ಪನ ಮನೆಯಲ್ಲಿದ್ದ ಮತ್ತೊಬ್ಬಳು ಮಗು ತಂದೆ, ತಾಯಿ ತಂಗಿಯನ್ನು ಕಳೆದುಕೊಂಡು ಅನಾಥವಾಗಿದೆ.
ಸಿದ್ದಾಪುರ ಠಾಣಾಧಿಕಾರಿ ಈ. ಮಂಜುನಾಥ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.