ಸಿದ್ದಾಪುರ; 25 ಕೋಟಿಯ 66/11 ಕೆ.ವಿ. ವಿದ್ಯುತ್ ಘಟಕಕ್ಕೆ ಭೂಮಿಪೂಜೆ
admincoorgdaily

ಸಿದ್ದಾಪುರ: ವಿರಾಜಪೇಟೆ ತಾಲೂಕು ಸಿದ್ದಾಪುರ ಭಾಗದ ಬೀಟಿಕಾಡು ಪ್ರದೇಶದಲ್ಲಿ ನೂತನ 66/11 ಕೆ.ವಿ. ವಿದ್ಯುತ್ ಪ್ರಸರಣ ಘಟಕದ ಸ್ಥಾಪನೆ ಹಾಗೂ ಹೊಸ ವಿದ್ಯುತ್ ಮಾರ್ಗದ ಅಳವಡಿಕೆ ಕಾಮಗಾರಿಗೆ ಒಟ್ಟು 25 ಕೋಟಿ ವೆಚ್ಚದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಇಂದು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು, 66/11 ಕೆ.ವಿ. ಸಾಮರ್ಥ್ಯದ ಈ ವಿದ್ಯುತ್ ಪ್ರಸರಣ ಘಟಕ ಕಾರ್ಯಾರಂಭಗೊಂಡ ಬಳಿಕ ಸಿದ್ದಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎದುರಾಗುತ್ತಿರುವ ವಿದ್ಯುತ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ರಾಮೀಣ ಭಾಗದ ಜನರಿಗೆ ಉತ್ತಮ ಹಾಗೂ ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಗೆ ವಿಶೇಷ ಅನುದಾನ ಒದಗಿಸಿದೆ. ಇದರಿಂದ ಕೃಷಿಕರು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ. ನೂತನ ವಿದ್ಯುತ್ ಮಾರ್ಗದ ಅಳವಡಿಕೆಯಿಂದ ವಿದ್ಯುತ್ ಪ್ರಸರಣದ ಗುಣಮಟ್ಟ ಸುಧಾರಣೆಯಾಗಲಿದ್ದು, ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುವುದು ತಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಈಗಾಗಲೇ ಕ್ಷೇತ್ರದಾದ್ಯಂತ ವಿದ್ಯುತ್ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಅನುದಾನ ಒದಗಿಸಲಾಗಿದ್ದು, ಈ ಯೋಜನೆ ಪೂರ್ಣಗೊಂಡ ಬಳಿಕ ಕ್ಷೇತ್ರದ ಜನರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗಲಿವೆ ಎಂದು ಮಾನ್ಯ ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ವಲಯ ಅಧ್ಯಕ್ಷರಾದ ಪ್ರತೀಶ್, ಕಾವೇರಿ ಜಲಾನಯನ ಮಂಡಳಿಯ ನಿರ್ದೇಶಕರಾದ ಸೂರಜ್ ಹೊಸೂರು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪಿ ವಿ ಜಾನ್ಸನ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಹನೀಫ್, ತಾಲೂಕು ಘಟಕದ ಅಧ್ಯಕ್ಷರು ರಫೀಕ್, ತಾಲೂಕು ಪಂಚಾಯತ್ ಮಾಜಿ ಸದಸ್ಯರು ಬಿಜೋಯ್, ಪ್ರಮುಖರಾದ ಮೊಹಮ್ಮದ್ ಆಲೀ, ಅಬ್ದುಲ್ ಸುಕೂರ್, ಪಳನಿ, ಚಿನ್ನಮ್ಮ, ಸತೀಶ್, ಆಪ್ರು ರವೀಂದ್ರ, ಚೆಕು, ಅನಿಲ್, ವೆಂಕಟೇಶ್, ಕುಂಡಚ್ಚಿರ ಮಂಜು ದೇವಯ್ಯ, ಬಶೀರ್, ನೌಶಾದ್, ಜಾಫರ್, ರವಿ, ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.