Kodagu

ಸಿದ್ದಾಪುರ; ಪೌರ ಕಾರ್ಮಿಕರಿಗೆ ಸನ್ಮಾನ

admincoorgdaily

ಸಿದ್ದಾಪುರ; ಪೌರ ಕಾರ್ಮಿಕರಿಗೆ ಸನ್ಮಾನ
ಸಿದ್ದಾಪುರ:ವಿಶ್ವ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಸಿದ್ದಾಪುರ ಗ್ರಾಮ ಪಂಚಾಯಿತಿ ವತಿಯಿಂದ ಐದು ಮಂದಿ ಪೌರಕಾರ್ಮಿಕರನ್ನು ಬುಧವಾರ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತಾಧಿಕಾರಿ ದಿನೇಶ್ ಕುಮಾರ್, ಪೌರಕಾರ್ಮಿಕರ ಸೇವೆಗೆ ಸೂಕ್ತ ಗೌರವ ಕಲ್ಪಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು. ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಸುಕಿನಲ್ಲೇ ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು ಇಡೀ ಮನುಕುಲದ ಆರೋಗ್ಯ ರಕ್ಷಕರಾಗಿದ್ದಾರೆ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಕೆ.ವಿ. ಮಾತನಾಡಿ, ಗ್ರಾಮ ಹಾಗೂ ನಗರ ಪ್ರದೇಶಗಳ ನೈರ್ಮಲ್ಯ, ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಪೌರಕಾರ್ಮಿಕರು ವಹಿಸುವ ಜವಾಬ್ದಾರಿ ಹಾಗೂ ಅವರ ಶ್ರಮ ಶ್ಲಾಘನೀಯವಾಗಿದ್ದು, ಅವರ ಸೇವೆಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಪೌರಕಾರ್ಮಿಕರು ಆರೋಗ್ಯ ಮತ್ತು ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪಂಚಾಯಿತಿ ಸೇವೆ ಸಲ್ಲಿಸುತ್ತಿರುವ ಮಹದೇವ, ಸುರೇಶ, ಯಶೋದ, ರವಿ, ಮಂಜುನಾಥ ಅವರನ್ನು ಸನ್ಮಾನಿಸಲಾಯಿತು.

ಸಿಬ್ಬಂದಿಗಳಾದ ಈಶ್ವರ, ಸುಬ್ರಮಣಿ, ಕೋಕಿಲ, ಸವಿತ, ರಜಿನಿ, ಗಗನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.