ಸಿದ್ದಾಪುರ;ನ.9 ರಂದು ಬೃಹತ್ ಪ್ರತಿಭಟನಾ ಜಾಥಾ
admincoorgdaily

ಸಿದ್ದಾಪುರ: ಮತದಾರರಿಗೆ ಸಂವಿಧಾನದ ಅಡಿಯಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ನವೆಂಬರ್ 9 ರಂದು ಸಂಜೆ 4 ಗಂಟೆಗೆ ಸಿದ್ದಾಪುರದ ಸಮಾನ ಮನಸ್ಕರ ವೇದಿಕೆ ವತಿಯಿಂದ ನೆಲ್ಲುಹುದಿಕೇರಿಯಿಂದ ಸಿದ್ದಾಪುರಕ್ಕೆ ಕಾಲ್ನಡಿಗೆ ಜಾಥಾ ನಡೆಸಲಾಗುವುದು ಎಂದು ಸಮಾನ ಮನಸ್ಕರ ವೇದಿಕೆಯ ಕಾರ್ಯದರ್ಶಿ ಪಿ.ಆರ್. ಭರತ್ ಹೇಳಿದರು.
ಸಮಾನ ಮನಸ್ಕರ ವೇದಿಕೆ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತನಗೆ ಬೇಕಾದವರನ್ನು ಚುನಾವಣಾ ಅಧಿಕಾರಿಯಾಗಿ ನೇಮಿಸುವ ಮೂಲಕ ಚುನಾವಣಾ ಆಯೋಗವನ್ನು ತನಗಿಷ್ಟ ಬಂದ ರೀತಿಯಲ್ಲಿ ಬಳಸುತ್ತಿದ್ದಾರೆ. ಅಲ್ಲದೆ ಚುನಾವಣೆ ಸಂಬಂಧದಲ್ಲಿ ಕೋಮುವಾದವನ್ನು ಬಳಸಿ ಸಮಾಜದಲ್ಲಿ ಕೋಮು ಘರ್ಷಣೆ ನಡೆಸುವ ಮೂಲಕ ಮತದಾನವನ್ನು ಪಕ್ಷಗೊತ್ತಿತ್ತಿದೆ ಎಂದು ದೂರಿದರು. ಚುನಾವಣಾ ಆಯೋಗವನ್ನು ತನ್ನ ಪಕ್ಷದ ಪದ್ಧತಿಯನ್ನು ಬದಲಾಯಿಸಿಕೊಂಡು ಬಿಜೆಪಿ ಪರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಹಾಗೂ ಎಸ್.ಐ.ಆರ್ ನಿಂದ ಹೊರಗುಳಿದವರನ್ನು ಮರು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಸಿದ್ದಾಪುರ ಹಾಗೂ ನೆಲ್ಲುಹುಡಿಕೇರಿಯ ಸಮಾನ ಮನಸ್ಕರ ವೇದಿಕೆ ವತಿಯಿಂದ ಪ್ರತಿಭಟನಾ ಜಾಥಾ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರತಿಭಟನಾ ಸಭೆಯಲ್ಲಿ ಎಸ್.ಐ.ಆರ್ ವಿರುದ್ಧ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಿದ ರಾಜ್ಯದ ಪ್ರಮುಖ ಹೋರಾಟಗಾರರಾದ ಸುದೀರ್ ಕುಮಾರ್, ದಿವ್ಯೇಶ್, ರಾಜ್ಯ ಉಪಕಾರ್ಯದರ್ಶಿ ಅನುಪಮಾ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ವೇದಿಕೆ ಅಧ್ಯಕ್ಷ ಜಗನ್ನನ್ ಮಾತನಾಡಿ, ಎಸ್.ಐ.ಆರ್ ನಿಂದ ರಾಷ್ಟ್ರವ್ಯಾಪ್ತಿಯಲ್ಲಿ ಹಲವಾರು ಮಂದಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಸಂವಿಧಾನದ ವ್ಯವಸ್ಥೆಯನ್ನೇ ಬದಲಾಯಿಸುವ ಹುನ್ನಾರವನ್ನು ಬಿಜೆಪಿಯ ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದರು.
ವೇದಿಕೆ ಕೋಶಾಧಿಕಾರಿ ಹಕೀಂ ಮಾತನಾಡಿ, ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷವು ಸಂಪೂರ್ಣ ಬೆಂಬಲ ನೀಡಲಿದೆ. ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ಸಮಾನ ಮನಸ್ಕರ ವೇದಿಕೆ ನಡೆಸಲು ಮುಂದಾಗಿರುವ ಪ್ರತಿಭಟನೆಗೆ ಸಾರ್ವಜನಿಕರು ಉತ್ತಮ ಬೆಂಬಲ ನೀಡುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಸೈಯದ್ ಬಾವ, ಪದಾಧಿಕಾರಿಗಳಾದ ಕುಂಞ್ಞನ್, ಅಸ್ಕರ್, ಉದಯಕುಮಾರ್, ರಮೇಶ್, ಚಂದ್ರನ್, ಶಿವರಾಮನ್ ಹಾಜರಿದ್ದರು.