ಸಿದ್ದಾಪುರ; ವಿಕೃತ ಕಾಮಿ ಅರೆಸ್ಟ್, ಲೈನ್ ಮನೆ ಬಾತ್‌ರೂಂನಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿದ್ದ ಫೀಲ್ಡ್ ಆಫೀಸರ್
admincoorgdaily

ಮಡಿಕೇರಿ:ಮಹಿಳೆಯರು ಸ್ನಾನ ಮಾಡುವುದನ್ನು ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದ ಆರೋಪದ ಮೇಲೆ ಖಾಸಗಿ ಕಾಫಿ ತೋಟದ ಮಾಜಿ ಸಿಬ್ಬಂದಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಿದ್ದಾಪುರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಸಿದ್ದಾಪುರ ಸಮೀಪದ ಬಾಡಗ-ಬಾಣಂಗಾಲ ಗ್ರಾಮದ ಖಾಸಗಿ ಸಂಸ್ಥೆಗೆ ಸೇರಿದ ಕಾಫಿ ತೋಟದಲ್ಲಿ ಈ ಹಿಂದೆ ಫೀಲ್ಡ್ ಆಫೀಸರ್ ಆಗಿದ್ದ ದೀಪಕ್ (39) ಎಂಬಾತನೇ ಬಂಧಿತ ಆರೋಪಿ.
ಆರೋಪಿ ದೀಪಕ್ ತೋಟದ ಲೈನ್ ಮನೆಯೊಂದರ ಸ್ನಾನದ ಕೊಠಡಿಯ ಮೇಲ್ಛಾವಣಿಯ ಹೆಂಚಿನ ಬದಿಯ ಮರದ ರೀಪರ್‌ಗೆ ರಹಸ್ಯ ಕ್ಯಾಮೆರಾವೊಂದನ್ನು ಅಳವಡಿಸಿದ್ದ. ಅದಕ್ಕೆ ಚಿಪ್ ಹಾಕಿ ತನ್ನ ಮೊಬೈಲ್ ಸಂಖ್ಯೆಗೆ ಸಂಪರ್ಕ ಕಲ್ಪಿಸಿಕೊಂಡು ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದ ಎನ್ನಲಾಗಿದೆ.
ಇತ್ತೀಚೆಗೆ ಗೌರಿ-ಗಣೇಶ ಹಬ್ಬಕ್ಕೆ ಆ ಲೈನ್ ಮನೆಗೆ ಬಂದಿದ್ದ ಮಹಿಳೆಯೊಬ್ಬರು ಸ್ನಾನಕ್ಕೆ ಹೋದಾಗ ಈ ರಹಸ್ಯ ಕ್ಯಾಮೆರಾ ಕಂಡುಬಂದಿದೆ. ತಕ್ಷಣ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಆರೋಪಿ ದೀಪಕ್‌ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.