ಸಿದ್ದಾಪುರ;ಗಾಂಜಾ ಸೇವನೆಗೆ ಟ್ರಾಫಿಕ್ ಡ್ಯೂಟಿ ಶಿಕ್ಷೆ
admincoorgdaily

ಸಿದ್ದಾಪುರ: ಪ್ರಕರಣವೊಂದರಲ್ಲಿ ತಪ್ಪೊಪ್ಪಿಕೊಂಡ ಆರೋಪಿ ಸಿದ್ದಾಪುರ ಪಟ್ಟಣದಲ್ಲಿ ವಾಹನ ಸಂಚಾರ ಹಾಗೂ ಜನದಟ್ಟಣೆ ನಿಯಂತ್ರಿಸುವ ಸಮುದಾಯ ಸೇವೆ ಶಿಕ್ಷೆಗೆ ಗುರಿಯಾದ ಘಟನೆ ನಡೆದಿದೆ.
ಗಾಂಜಾ ಸೇವನೆ ಹಾಗೂ ಕುಡಿದು ಗಲಾಟೆ ಮಾಡಿದ ಪ್ರಕರಣದಲ್ಲಿ
₹5 ಸಾವಿರ ದಂಡ ವಿಧಿಸುವುದರ ಜೊತೆಗೆ ಸಿದ್ದಾಪುರ ಪಟ್ಟಣದಲ್ಲಿ ವಾಹನ ಸಂಚಾರ ಹಾಗೂ ಜನದಟ್ಟಣೆ ನಿಯಂತ್ರಿಸುವ ಸಮುದಾಯ ಸೇವೆ ಶಿಕ್ಷೆ ವಿಧಿಸಿ ವಿರಾಜಪೇಟೆಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯ ಆದೇಶ ಹೊರಡಿಸಿತು.
ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎ. ಅಸೀಮ್ ಎಂಬಾತನ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯವು ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 27(b) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 355ರ ಅಡಿಯಲ್ಲಿ ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿದೆ.
ಎನ್ಡಿಪಿಎಸ್ ಕಾಯ್ದೆಯಡಿ ₹5,000 ದಂಡ ವಿಧಿಸಿದ ನ್ಯಾಯಾಲಯ, ಹೆಚ್ಚುವರಿ ಶಿಕ್ಷೆಯಾಗಿ ನವೆಂಬರ್ 15ರಂದು ಸಿದ್ದಾಪುರ ಪಟ್ಟಣದಲ್ಲಿ ವಾಹನ ಸಂಚಾರ ಹಾಗೂ ಜನದಟ್ಟಣೆ ನಿಯಂತ್ರಿಸುವ ಸಮುದಾಯ ಸೇವೆ ಸಲ್ಲಿಸುವಂತೆ ಆದೇಶಿಸಿತ್ತು. ಈ ಕಾರ್ಯವನ್ನು ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್ಐ ಅಥವಾ ಪೊಲೀಸ್ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ನಿರ್ವಹಿಸಬೇಕೆಂದು ಸೂಚಿಸಿತ್ತು.
ಸಮುದಾಯ ಸೇವೆ ಸಮರ್ಪಕವಾಗಿ ನೆರವೇರಿದ ಕುರಿತು ವರದಿ ಸಲ್ಲಿಸುವಂತೆ ನ್ಯಾಯಾಲಯವು ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್ಐಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ಆರೋಪಿ ಸಿದ್ದಾಪುರ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ವಾಹನ ಸಂಚಾರ ಹಾಗೂ ಜನದಟ್ಟಣೆ ನಿಯಂತ್ರಿಸುವ ಮೂಲಕ ಸಮುದಾಯ ಸೇವೆ ಸಲ್ಲಿಸಿದನು.
ತಪ್ಪಿತಸ್ಥರಿಗೆ ದಂಡ ವಿಧಿಸುವುದರ ಜೊತೆಗೆ ಸಮಾಜಕ್ಕೆ ಉಪಯುಕ್ತವಾಗುವ ಸಮುದಾಯ ಸೇವೆಯನ್ನೂ ಶಿಕ್ಷೆಯ ಭಾಗವನ್ನಾಗಿಸಿರುವ ನ್ಯಾಯಾಲಯದ ಕ್ರಮ ಸಾರ್ವಜನಿಕರ ಗಮನ ಸೆಳೆದಿದೆ.