ಸಿದ್ದಾಪುರ ವಾಹನ ಚಾಲಕರ ಮಜ್ದೂರ್ ಸಂಘದಿಂದ 33ನೇ ವರ್ಷದ ಆಯುಧ ಪೂಜೆ ಸಂಭ್ರಮ
admincoorgdaily

ಸಿದ್ದಾಪುರ:ಸಿದ್ದಾಪುರದ ವಾಹನ ಚಾಲಕರ ಮಜ್ದೂರ್ ಸಂಘದ ವತಿಯಿಂದ 33ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮವು ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಸಾಮೂಹಿಕ ವಾಹನ ಪೂಜಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ನಡೆದ ರಸ್ತೆ ಓಟ ಸ್ಪರ್ಧೆಯನ್ನು ಸ್ಥಳೀಯರಾದ ವೆಂಕಪ್ಪ ರೈ ಉದ್ಘಾಟಿಸಿದರು. ಮಕ್ಕಳಿಗೆ ನಿದಾನ ಸೈಕಲ್ ರೇಸ್, ಮಹಿಳೆಯರಿಗೆ ಮ್ಯೂಸಿಕಲ್ ಚೇರ್ ಸ್ಪರ್ಧೆಯನ್ನು ನಡೆಸಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಶಾಸಕ ಎ.ಎಸ್.ಪೊನ್ನಣ್ಣ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಸಂಘ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸ್ಥಳೀಯ ಕಲಾವಿದರಿಗೆ ವೇದಿಕೆಯನ್ನು ಒದಗಿಸುತ್ತಿರುವುದು ಪ್ರಶಂಸನೀಯವಾಗಿದೆ ಎಂದು ಆಯೋಜಕರ ಶ್ರಮವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಜೆ ಸಂಗೀತ ರಸಮಂಜರಿ ಕಾರ್ಯಕ್ರಮವು ನೆರೆದಿದ್ದವರನ್ನು ರಂಜಿಸಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸೂದನ್ ಸತೀಶ್, ಆಚರಣಾ ಸಮಿತಿ ಅಧ್ಯಕ್ಷ ದಾಸನ್, ಕಾರ್ಯದರ್ಶಿ ಸಜಿಲ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.