Kodagu

ಎಸ್‌ಎನ್‌ಡಿಪಿ ನೇತೃತ್ವದಲ್ಲಿ ಶ್ರೀ ನಾರಾಯಣ ಗುರು 172ನೇ ಜಯಂತಿ ಆಚರಣೆ

admincoorgdaily

ಎಸ್‌ಎನ್‌ಡಿಪಿ ನೇತೃತ್ವದಲ್ಲಿ ಶ್ರೀ ನಾರಾಯಣ ಗುರು 172ನೇ ಜಯಂತಿ ಆಚರಣೆ
ಸಿದ್ದಾಪುರ ;ವ್ಯಾಸ ಕವಿಯ ನಂತರ ವೇದಾಂತ ಸೂತ್ರವನ್ನು ಬರೆದ ಮಹಾನ್ ದಾರ್ಶನಿಕ ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಬರಬೇಕು ಎಂದು ಕರ್ನಾಟಕ ಆರ್ಯ ಈಡಿಗ ಸಮಾಜ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿಗಳು ಕರೆ ನೀಡಿದರು.

ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ (ಎಸ್‌ಎನ್‌ಡಿಪಿ) ಕರಡಿಗೋಡು ಶಾಖೆಯಲ್ಲಿ ಗುರುಗಳ 172ನೇ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ವಿದ್ಯಾಭ್ಯಾಸದೊಂದಿಗೆ ನಿತ್ಯ ಚಟುವಟಿಕೆಗಳ ಬಗ್ಗೆ ಪೋಷಕರು ನಿಗಾ ವಹಿಸುವುದರೊಂದಿಗೆ ಶಿಸ್ತಿನ ಪಾಲನೆ ತುಂಬಾ ಬೇಕಿದೆ ಎಂದರು.

ವನಿತಾ ಸಂಘದ ಜಿಲ್ಲಾಧ್ಯಕ್ಷೆ ರೀಶಾ ಸುರೇಂದ್ರ ಮಾತನಾಡಿ, ಶ್ರೀ ಗುರುಗಳು ಸಕಲ ಧರ್ಮಗಳನ್ನು ಕೇಂದ್ರೀಕರಿಸಿ ರಚಿಸಿದ 'ದೈವ ದಶಕ' ಗೀತೆಗೆ 100 ವರ್ಷಗಳು ಪೂರ್ಣಗೊಂಡಿರುವುದರ ಭಾಗವಾಗಿ ಎಲ್ಲಾ ಶಾಖೆಗಳಲ್ಲಿ ಗುರುಗಳ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.

ಎಸ್‌ಎನ್‌ಡಿಪಿ ಜಿಲ್ಲಾ ಕಾರ್ಯದರ್ಶಿ ಸಂಜೀವನ್ ಮಾತನಾಡಿ, 1903ರಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ (ಎಸ್‌ಎನ್‌ಡಿಪಿ) ಸ್ಥಾಪಿಸಲಾಗಿದ್ದು, 1912ರಲ್ಲಿ ವೇದಾಂತ ಅಭ್ಯಾಸಕ್ಕೆ ಶಿವಗಿರಿಯಲ್ಲಿ ಶ್ರೀ ಶಾರದಾ ವಿದ್ಯಾಪೀಠವನ್ನು ಸ್ಥಾಪಿಸುವ ಮೂಲಕ 'ಸಂಘಟನೆಯಿಂದ ಶಕ್ತರಾಗಿ, ವಿದ್ಯೆಯಿಂದ ಪ್ರಬುದ್ಧರಾಗಿ' ಎಂಬ ಸಂದೇಶವನ್ನು ಜಗತ್ತಿಗೆ ಮಹಾನ್ ಚೇತನ ಗುರುಗಳು ನೀಡಿದರು ಎಂದರು.

ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಮುನಾ ಮಾತನಾಡಿ, ಗುರುಗಳ ಜಯಂತಿಯನ್ನು ಗ್ರಾಮದ ಎಲ್ಲಾ ಬಾಂಧವರೊಂದಿಗೆ ಆಚರಿಸುತ್ತಿರುವುದು ಸಂತೋಷ ಎಂದರು.

2025-26ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮುದಾಯದ ಹಿರಿಯ ನಾಗರಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಹಗ್ಗ ಜಗ್ಗಾಟ ಹಾಗೂ ವಿವಿಧ ಮನರಂಜನಾ ಕ್ರೀಡೆಗಳು ನಡೆದವು.

ಕಾರ್ಯಕ್ರಮದಲ್ಲಿ ವನಿತಾ ಯೂನಿಯನ್ ಕೊಡಗು ಜಿಲ್ಲಾ ಅಧ್ಯಕ್ಷೆ ರೀಶಾ ಸುರೇಂದ್ರ, ಕಾರ್ಯದರ್ಶಿ ರತ್ನ ಅನೀಶ್, ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರತೀಶ್, ಗ್ರಾ.ಪಂ ಮಾಜಿ ಅಧ್ಯಕ್ಷೆ ಯಮುನಾ, ರೈತ ಸಂಘ ಅಮ್ಮತ್ತಿ ಹೋಬಳಿ ಅಧ್ಯಕ್ಷ ಸಿ.ಬಿ. ಪೂಣಚ್ಚ, ಆರ್. ರಾಜೀವ್, ಕೆ.ವಿ. ಪ್ರೇಮಾನಂದ, ಎಂ. ಸಜೀವ್, ಎ.ಕೆ. ಸತ್ಯನಾರಾಯಣ, ಎಂ.ಟಿ. ಶಿವಪ್ರಸಾದ್, ಕೆ.ಡಿ. ನಾಣಯ್ಯ ಹಾಜರಿದ್ದರು.