ಪತ್ರಕರ್ತರು ಪೊಲೀಸರ ಉತ್ತಮ ಬಾಂಧವ್ಯದಿಂದ ಸಮಾಜ ಸುಧಾರಣೆ ಸಾಧ್ಯ;ಮಂಜುನಾಥ್
admincoorgdaily


ಸಿದ್ದಾಪುರ: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಹಾಗೂ ಪೊಲೀಸರ ಪಾತ್ರ ದೊಡ್ಡದಿದ್ದು, ಮಾದ್ಯಮದವರು ಹಾಗೂ ಪೊಲೀಸರು ಉತ್ತಮ ಬಾಂಧವ್ಯ ಹೊಂದಿದ್ದರೆ ಮಾತ್ರ ಸಮಾಜವನ್ನು ತಿದ್ದಲು ಸಾಧ್ಯ ಎಂದು ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಿದ್ದಾಪುರದ ಟರ್ಫ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪತ್ರಕರ್ತರು ಹಾಗೂ ಪೊಲೀಸರು ಒತ್ತಡದಲ್ಲೇ ಕಾರ್ಯನಿರ್ವಹಿಸುತ್ತಿದ್ದು ಮಾನಸಿಕವಾಗಿ ಬಳಲಿರುತ್ತೇವೆ. ಈ ನಡುವೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಒತ್ತಡವನ್ನು ನಿವಾರಣೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪ್ರೆಸ್, ಪೊಲೀಸ್ ಹಾಗೂ ಪೊಲಿಟಿಷನ್ ಎಂಬ ಮೂರು "ಪಿ'ಗಳು ಸರಿಯಾದ ರೀತಿಯಲ್ಲಿ ಹೊಂದಾಣಿಕೆಯಿಂದ ಕೆಲಸ ಮಾಡಿದ್ದಲ್ಲಿ ಮಾತ್ರ " ಎಸ್" ಎಂಬ ಸಮಾಜ ಚೆನ್ನಾಗಿರುತ್ತದೆ ಎಂದ ಅವರು, ಸದಾ ಒತ್ತಡದಲ್ಲೇ ಕೆಲಸ ನಿರ್ವಹಿಸುತ್ತಿರುವ ಪತ್ರಕರ್ತರು ಹಾಗೂ ಪೊಲೀಸರು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಮಾನಸಿಕವಾಗಿ ನೆಮ್ಮದಿ ಗಳಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಪತ್ರಕರ್ತರು ಹಾಗೂ ಪೊಲೀಸರು ಸಮಾಜದ ಕಣ್ಣಾಗಿದ್ದು, ತಪ್ಪುಗಳನ್ನು ತಿದ್ದುವ ಮೂಲಕ ಸಮಾಜವನ್ನು ನೇರ ದಾರಿಗೆ ನಡೆಸುವ ಕಾಯಕದಲ್ಲಿ ತೊಡಗಿದ್ದಾರೆ. ಈ ನಡುವೆ ಕ್ರೀಡಾಕೂಟವನ್ನು ಆಯೋಜಿಸುವುದರೊಂದಿಗೆ ಒತ್ತಡವನ್ನು ನಿವಾರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಪೊಲೀಸರು ಹಾಗೂ ಪತ್ರಕರ್ತರು ಜಂಟಿಯಾಗಿ ಆಯೋಜಿಸಲಾಗುವುದೆಂದರು.
ಈ ಸಂದರ್ಭ ರಾಷ್ಟ್ರೀಯ ಸಮಿತಿ ಸದಸ್ಯರಾದ ಪಾರ್ಥ ಚಿನ್ನಪ್ಪ ಇದ್ದರು.
ತಾಲ್ಲೂಕು ಸಂಘದ ಕೋಶಾಧಿಕಾರಿ ಡಾ. ಹೇಮಂತ್ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ ನಿರೂಪಿಸಿ ವಂದಿಸಿದರು.
ಸಿದ್ದಾಪುರ ಠಾಣಾಧಿಕಾರಿಗೆ ಸನ್ಮಾನ: ಮಾದಕ ವಸ್ತುಗಳ ಬಳಕೆ ಹಾಗೂ ಅಪ್ರಾಪ್ತ ವಯಸ್ಸಿನ ಮಕ್ಕಳ ವಾಹನ ಚಾಲನೆ ಬಗ್ಗೆ ನಿರಂತರವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಕಾನೂನಿನ ಎಚ್ಚರಿಕೆ ನೀಡುತ್ತಿರುವ ಸಿದ್ದಾಪುರ ಪಿ.ಎಸ್.ಐ ಮಂಜುನಾಥ್.ಈ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.
ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಇಲ್ಲಿನ ಟರ್ಫ್ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಮೀಡಿಯಾ ಕ್ಯಾಪ್ಟನ್ 6 ತಂಡ ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಸ್ಥಾನವನ್ನು ಮೀಡಿಯಾ ವಾರಿಯರ್ಸ್ ಹಾಗೂ ತೃತೀಯ ಸ್ಥಾನವನ್ನು ಮೀಡಿಯಾ ಸೂಪರ್ ಕಿಂಗ್ಸ್ ಪಡೆದುಕೊಂಡರು. ಪಂದ್ಯಾವಳಿಯ ಉತ್ತಮ ಬ್ಯಾಟ್ಸ್ಮನ್ ಹೇಮಂತ್ ವಿರಾಜಪೇಟೆ, ಉತ್ತಮ ಬೌಲರ್ ಸತೀಶ್ ಸಿದ್ದಾಪುರ, ಉತ್ತಮ ಆಲ್ ರೌಂಡರ್ ಇಸ್ಮಾಯಿಲ್ ಕಂಡಕರೆ, ಸರಣಿ ಶ್ರೇಷ್ಠ ಮುಸ್ತಫ ಸಿದ್ದಾಪುರ ಹಾಗೂ ಫೇರ್ ಪ್ಲೇ ಪ್ರಶಸ್ತಿಯನ್ನು ಮೀಡಿಯಾ ಸೂಪರ್ ಕಿಂಗ್ಸ್ ಪಡೆದುಕೊಂಡರು. ಇದೇ ಸಂದರ್ಭ ಸಿದ್ದಾಪುರ ಪೊಲೀಸ್ ಹಾಗೂ ಪತ್ರಕರ್ತರ ನಡುವೆ ಸೌಹಾರ್ದ ಪಂದ್ಯಾಟ ನಡೆಯಿತು. ತೀರ್ಪುಗಾರರಾಗಿ ಸಿದ್ದಾಪುರದ ಅಜ್ಮಲ್ ಹಾಗೂ ನಿಯಾಸ್ ಸ್ಕೋರರಾಗಿ ಫಾಸಿಲ್ ಕಾರ್ಯನಿರ್ವಹಿಸಿದರು.
ಜಿಲ್ಲಾ ಸಂಘದ ಉಪಾಧ್ಯಕ್ಷ ಎ.ಎನ್ ವಾಸು, ನಿರ್ದೇಶಕರಾದ ಸುಬ್ರಮಣಿ, ಇಸ್ಮಾಯಿಲ್ ಕಂಡಕ್ಕರೆ, ರವಿಕುಮಾರ್, ತಾಲ್ಲೂಕು ಸಂಘದ ಉಪಾಧ್ಯಕ್ಷ ಪುತ್ತಂ ಪ್ರದೀಪ್, ಸಹ ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ತೇಜಸ್ ಪಾಪಯ್ಯ ಹಾಗೂ ಸದಸ್ಯರು ಇದ್ದರು.