ನ.22ರಂದು ಸೋಮವಾರಪೇಟೆಯಲ್ಲಿ ಸಮಾಜ ಸೇವಕ ಒಕ್ಕಲಿಗ ನಾಯಕ ಹರಪಳ್ಳಿ ರವೀಂದ್ರ ಪುಸ್ತಕ ಬಿಡುಗಡೆ
admincoorgdaily

ಮಡಿಕೇರಿ ನ.20 : ಕೊಡಗು ಜಿಲ್ಲೆಯಲ್ಲಿ ಸಮಾಜ ಸೇವೆ ಹಾಗೂ ರೈತರ ಹಿತಾಸಕ್ತಿಗೆ ಧ್ವನಿಯಾಗುವ ಮೂಲಕ ಜನಪರವಾಗಿ ಗುರುತಿಸಿಕೊಂಡಿರುವ ಸಮಾಜ ಸೇವಕ ಹರಪಳ್ಳಿ ರವೀಂದ್ರ ಅವರ ಕುರಿತಾದ ಸಮಾಜ ಸೇವಕ.. ಒಕ್ಕಲಿಗ ನಾಯಕ ಹರಪಳ್ಳಿ ರವೀಂದ್ರ ಪುಸ್ತಕ ಬಿಡುಗಡೆ ಮತ್ತು ಬೃಹತ್ ರೈತ ಸಮಾವೇಶ ನ.22 ರಂದು ಸೋಮವಾರಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಕೊಡಗು ಚಾನಲ್ ನ ಪ್ರಧಾನ ಸಂಪಾದಕ ಜಿ.ವಿ.ರವಿಕುಮಾರ್ ತಿಳಿಸಿದ್ದಾರೆ.
ಮಡಿಕೇರಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹರಪಳ್ಳಿ ರವೀಂದ್ರ ಅಭಿಮಾನಿಗಳ ಬಳಗ ಹಾಗೂ ಕೊಡಗು ಚಾನಲ್ ನ ಸಂಯುಕ್ತ ಆಶ್ರಯದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ ಎಂದರು.
ಹರಪಳ್ಳಿ ರವೀಂದ್ರ ಅವರು ಸಮಾಜಮುಖಿ ಕಾರ್ಯಗಳ ಮೂಲಕ ಜನರೊಂದಿಗೆ ನಿಕಟ ಸಂಬಂಧ ಬೆಳೆಸಿಕೊಂಡಿದ್ದು, ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.
ಅಸಹಾಯಕರಿಗೆ ನೆರವು ನೀಡುವುದು ಹಾಗೂ ಸಾರ್ವಜನಿಕ ಹಿತಕ್ಕಾಗಿ ನಿರಂತರವಾಗಿ ಶ್ರಮಿಸುವುದು ಅವರ ಸೇವಾ ಮನೋಭಾವದ ಪ್ರಮುಖ ಲಕ್ಷಣಗಳಾಗಿವೆ.
ಆರ್ಥಿಕವಾಗಿ ಹಿಂದುಳಿದವರು, ಸಂಕಷ್ಟದಲ್ಲಿರುವ ಕುಟುಂಬಗಳು ಹಾಗೂ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಅವರು ಸದಾ ಮುಂಚೂಣಿಯಲ್ಲಿ ನಿಂತು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟವರ ಗಮನ ಸೆಳೆಯುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
ವಿಶೇಷವಾಗಿ ರೈತರ ಬದುಕು, ಕೃಷಿ ಕ್ಷೇತ್ರದ ಸಮಸ್ಯೆಗಳು, ಗ್ರಾಮೀಣ ಜನರ ಹಿತಾಸಕ್ತಿ ಹಾಗೂ ಸಮಾಜದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಲ್ಲಿ ಅವರ ಕಾಳಜಿ ಗಮನಾರ್ಹವಾಗಿದೆ. ರೈತರ ಸಮಸ್ಯೆಗಳಿಗೆ ಧ್ವನಿಯಾಗಬೇಕು, ಕೃಷಿಕರ ಬದುಕಿಗೆ ಬೆಂಬಲ ನೀಡಬೇಕು ಹಾಗೂ ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಬೇಕು ಎಂಬ ಆಶಯದೊಂದಿಗೆ ಹರಪಳ್ಳಿ ರವೀಂದ್ರ ಅವರು ವಿವಿಧ ಜನಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಈ ಕಾರಣಕ್ಕಾಗಿ ರವೀಂದ್ರ ಅವರ ಕುರಿತು ಪುಸ್ತಕವನ್ನು ಹೊರ ತರಲಾಗುತ್ತಿದೆ ಎಂದು ಜಿ.ವಿ.ರವಿಕುಮಾರ್ ವಿವರಿಸಿದರು.
ಹರಪಳ್ಳಿ ರವೀಂದ್ರ ಅಭಿಮಾನಿಗಳ ಬಳಗದ ಅಧ್ಯಕ್ಷ ಹೆಚ್.ಎ.ನಾಗರಾಜು ಮಾತನಾಡಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಹರಪಳ್ಳಿ ರವೀಂದ್ರ ಅವರು ಯಾವುದೇ ಪ್ರಚಾರ ಬಯಸದೆ ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ವಿವಿಧ ಗ್ರಾಮಗಳ ಕೆರೆಗಳನ್ನು ಅಭಿವೃದ್ಧಿ ಪಡಿಸಿ ಶಾಶ್ವತವಾಗಿ ನೀರು ನಿಲ್ಲುವಂತೆ ಮಾಡಿದ್ದಾರೆ. ಸಂಕಷ್ಟದಲ್ಲಿರುವವರಿಗೆ ತಕ್ಷಣ ಸ್ಪಂದಿಸುತ್ತಾರೆ ಎಂದರು.
ಬಳಗದ ಪ್ರಮುಖ ಜಿ.ಎ.ಮಧು ಕುಮಾರ್ ಮಾತನಾಡಿ ಸೋಮವಾರಪೇಟೆಯಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಬಾಲಕಿಯರ ವಸತಿಗೃಹ ನಿರ್ಮಾಣಗೊಂಡಿದ್ದು, ಇದು ಹರಪಳ್ಳಿ ರವೀಂದ್ರ ಅವರಿಗೆ ವಿದ್ಯಾರ್ಥಿಗಳ ಮೇಲೆ ಇರುವ ಕಾಳಜಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಕೊಳಗದಾಳು ಗ್ರಾಮದಲ್ಲಿ 25 ಎಕರೆ ಪ್ರದೇಶದಲ್ಲಿ ವಿದ್ಯಾಸಂಸ್ಥೆ ಸ್ಥಾಪಿಸಲಾಗುತ್ತಿದೆ, ವಿರಾಜಪೇಟೆಯಲ್ಲೂ ಒಕ್ಕಲಿಗರ ಅಭ್ಯುದಯಕ್ಕಾಗಿ ಭೂಮಿ ಖರೀದಿಸಿದ್ದಾರೆ. ಸೋಮವಾರಪೇಟೆಯಲ್ಲಿ ದೇವರ ಕೆರೆ ಮತ್ತು ಆನೆ ಕೆರೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಶಾಂತಳ್ಳಿಯಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದ್ದಾರೆ, ಶಾಲೆಯೊಂದಕ್ಕೆ ಉಚಿತ ಬಸ್ ನೀಡಿದ್ದಾರೆ. ಸಮಾಜಸೇವೆಗಾಗಿ ಕೆಂಪೇಗೌಡ ಪ್ರಶಸ್ತಿ, ಆಧುನಿಕ ಭಗೀರಥ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ರವೀಂದ್ರ ಅವರು ಪಡೆದಿದ್ದಾರೆ.
ಸಮಾಜಸೇವೆಗಾಗಿಯೇ ಜೀವನವನ್ನು ಮುಡಿಪಾಗಿಟ್ಟಿರುವ ರವೀಂದ್ರ ಅವರ ಕುರಿತಾದ ಪುಸ್ತಕವನ್ನು ಹೊರ ತರತ್ತಿರುವುದು ಸಾರ್ಥಕ ಕಾರ್ಯ ಎಂದರು.
ಸಮಾಜ ಸೇವಕ ಒಕ್ಕಲಿಗ ನಾಯಕ ಹರಪಳ್ಳಿ ರವೀಂದ್ರ ಪುಸ್ತಕದ ಸಂಪಾದಕ ಹಾಗೂ ಕೊಡಗು ಚಾನಲ್ ನ ವರದಿಗಾರ ಟಿ.ಜೆ.ಪ್ರವೀಣ್ ಕುಮಾರ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ಹಾಗೂ ಭೋಜೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ರೈತ ಹೋರಾಟ ಸಮಿತಿ ಸೋಮವಾರಪೇಟೆ ಜಿಲ್ಲಾ ಅಧ್ಯಕ್ಷ ಸುರೇಶ್ ಚಕ್ರವರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಮಾಜಿ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಮಲೆನಾಡು ಅಭಿವೃದ್ಧಿ ನಿಗಮದ ನಿರ್ದೇಶಕ ಕೆ.ಎಂ. ಲೋಕೇಶ್, ಕೊಡಗು ಚಾನಲ್ ಪ್ರಧಾನ ಸಂಪಾದಕ ರವಿಕುಮಾರ್ ಜಿ.ವಿ., ಕೃತಿಯ ಸಂಪಾದಕ ಟಿ.ಜೆ. ಪ್ರವೀಣ್ ಕುಮಾರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘು ಗೌಡ, ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ ಹಾಗೂ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಜೊತೆಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೀಪಕ್ ಬಿ.ಜೆ., ಯುವ ಉದ್ಯಮಿ ಹಾಗೂ ಸಮಾಜ ಸೇವಕ ಪ್ರಸನ್ನ ಎಡಿಕೇರಿ, ಕೊಡಗು ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ, ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಹಾಗೂ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ.ನಾಗರಾಜ್ ಉಪಸ್ಥಿತರಿರಲಿದ್ದಾರೆ.
ಸಮಾಜ ಸೇವೆ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹರಪಳ್ಳಿ ರವೀಂದ್ರ ಅವರ ಸಾಮಾಜಿಕ ಕಾಳಜಿ, ಸೇವಾ ಚಟುವಟಿಕೆಗಳು ಮತ್ತು ಒಕ್ಕಲಿಗ ಸಮುದಾಯದ ಸಂಘಟನೆಯಲ್ಲಿ ಅವರ ಪಾತ್ರವನ್ನು ಪರಿಚಯಿಸುವ ಉದ್ದೇಶದಿಂದ ಈ ಕೃತಿಯನ್ನು ಹೊರತರಲಾಗುತ್ತಿದೆ.
ಕಾರ್ಯಕ್ರಮಕ್ಕೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಟಿ.ಜೆ.ಪ್ರವೀಣ್ ಕುಮಾರ್ ಮನವಿ ಮಾಡಿದರು.