ಚೆಂಬು ಗ್ರಾಮದ ದಬ್ಬಡ್ಕದಲ್ಲಿ ವಿದ್ಯುತ್ ವಂಚಿತ ಮನೆಗಳಿಗೆ ಸೌರ ವಿದ್ಯುತ್ - ಶಾಸಕ ಪೊನ್ನಣ್ಣ ವಿಶೇಷ ಕಾಳಜಿ
admincoorgdaily

ವಿರಾಜಪೇಟೆ:* ದಶಕಗಳಿಂದ ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿದ್ದ ಚೆಂಬು ಗ್ರಾಮದ ದಬ್ಬಡ್ಕ ಭಾಗದ ಮನೆಗಳಿಗೆ ಕೊನೆಗೂ ಬೆಳಕು ಮೂಡಿದೆ.
ಶಾಸಕ ಎ.ಎಸ್. ಪೊನ್ನಣ್ಣ ಅವರ ವಿಶೇಷ ಕಾಳಜಿ ಮತ್ತು ಸೂಚನೆಯಂತೆ, ಅರಣ್ಯ ಇಲಾಖೆಯ ಮುಖಾಂತರ ತಾತ್ಕಾಲಿಕ ಸೌರ ವಿದ್ಯುತ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ದಬ್ಬಡ್ಕ ಭಾಗದ 29 ಕುಟುಂಬಗಳು ವಿದ್ಯುತ್ ಇಲ್ಲದೆ ಕತ್ತಲಲ್ಲಿ ಜೀವನ ಸಾಗಿಸುತ್ತಿದ್ದು, ಈ ಪೈಕಿ ಬೇಡಿಕೆ ಸಲ್ಲಿಸಿದ 22 ಕುಟುಂಬಗಳಿಗೆ ಮೊದಲ ಹಂತದಲ್ಲಿ ಸೋಲಾರ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಕಮಲ ಬದಿಕೋಡಿ ಅವರ ಮನೆಗೆ ಸೋಲಾರ್ ಅಳವಡಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇನ್ನುಳಿದ ಮನೆಗಳಿಗೆ ನಿರಂತರವಾಗಿ ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರ ಅನುಪಸ್ಥಿತಿಯಲ್ಲಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಸಂಪಾಜೆ ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ, ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು ಹಾಗೂ ಸ್ಥಳೀಯ ಮುಖಂಡರು ಪೂಜೆ ನೆರವೇರಿಸಿ ಚಾಲನೆ ನೀಡಿದರು.
ವಿದ್ಯುತ್ ಸೌಲಭ್ಯಕ್ಕೆ ನಿರಂತರ ಪ್ರಯತ್ನ:
ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ ಮಾತನಾಡಿ, ಶಾಸಕರ ಸೂಚನೆಯಂತೆ ಸರ್ಕಾರದಿಂದ ಸಿಕ್ಕಿರುವ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೊಲ್ಯದ ಗಿರೀಶ್ ಮಾತನಾಡಿ, ಶಾಸಕರು ವಿಶೇಷ ಕಾಳಜಿಯಿಂದ ಈ ಸೌಲಭ್ಯ ಒದಗಿಸಿದ್ದು, ಪ್ರತಿಯೊಬ್ಬರಿಗೂ ತಲುಪುವಂತಾಗಲಿ ಎಂದರು.
ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು ಮಾತನಾಡಿ, 2012ರಲ್ಲಿ ಅಂದಿನ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ದಬ್ಬಡ್ಕದ 28 ಮನೆಗಳಿಗೆ ವಿದ್ಯುತ್ ಸಂಪರ್ಕ ಬಾಕಿ ಉಳಿದಿತ್ತು. ಸಮಸ್ಯೆ ಮನಗಂಡ ಶಾಸಕ ಪೊನ್ನಣ್ಣ ಅವರು ಸರ್ಕಾರದೊಂದಿಗೆ ಮಾತನಾಡಿ, ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಅನುಮತಿ ದೊರೆಯುವವರೆಗೆ ಅನುಕೂಲವಾಗಲಿ ಎಂದು ಸೌರ ವಿದ್ಯುತ್ ಕಲ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುಮತಿ ದೊರೆತ ಬಳಿಕ ಶಾಶ್ವತ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ವಲಯ ಅಧ್ಯಕ್ಷ ಸೋಮಣ್ಣ ಬಾಲಂಬಿ, ಬಂಗಾರಕೋಡಿ ವೆಂಕಟರಮಣ, ರಘುನಾಥ್ ಬಾಲಂಬಿ, ವಿನಯ, ಹರ್ಷಿತ್ ಚೆಂಡೆಡ್ಕ, ಉದಯ ಹೊದ್ದಟ್ಟಿ, ಶಿವರಾಮ, ಭುವನೇಶ್ವರ, ಗಿರೀಶ್ ಸೇರಿದಂತೆ ಗ್ರಾಮಸ್ಥರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು. ಹೊಸೂರು ಗಿರೀಶ್ ವಂದಿಸಿದರು.