ಸೋಮವಾರಪೇಟೆ;ಗೌಡಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ
admincoorgdaily

ಸೋಮವಾರಪೇಟೆ:ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 1.23 ಕೋಟಿ ರೂ.ಗಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.25 ರಷ್ಟು ಲಾಭಂಶ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್ ಹೇಳಿದರು.
ಸಂಘದ ಆವರಣದಲ್ಲಿ ಭಾನುವಾರ ನಡೆದ ಮಹಾಸಭೆಯಲ್ಲಿ ಮಾತನಾಡಿದ ಅವರು ಸಂಘದಲ್ಲಿ 2791 ಸದಸ್ಯರಿದ್ದು, 61.44ಕೋಟಿ ರೂಗಳ ದುಡಿಯುವ ಬಂಡವಾಳವನ್ನು ಹೊಂದಿದೆ. 2026-27ನೇ ಸಾಲಿಗೆ 53.94 ಕೋಟಿ ರೂ.ಗಳಷ್ಟು ಸದಸ್ಯರಿಗೆ ಸಾಲವನ್ನು ವಿತರಿಸಲಾಗಿದೆ. 2024-25ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಕೇಂದ್ರ ಬ್ಯಾಂಕ್‌ನಿಂದ ನಮ್ಮ ಸಂಘಕ್ಕೆ ತೃತೀಯ ಬಹುಮಾನ ಪಡೆದಿರುತ್ತೇವೆ ಎಂದು ಹೇಳಿದರು.
2024-25ನೇ ಸಾಲಿನಲ್ಲಿ 505 ಮಂದಿ ಸದಸ್ಯರಿಗೆ ಶೇ.10.5 ಬಡ್ಡಿ ದರದಲ್ಲಿ ಜಾಮೀನು ಸಾಲ ನೀಡಿದ್ದು, 9ಕೋಟಿ ರೂ, ಅಸಲು ಮತ್ತು 67ಲಕ್ಷ ರೂ. ಬಡ್ಡಿಯನ್ನು ಪಡೆಯಲಾಗಿದೆ. ಎಲ್ಲಾ ಸದಸ್ಯರು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುತ್ತಿರುವುದರಿಂದ ಸಂಘದ ವ್ಯವಹಾರ ಉತ್ತಮವಾಗಿದೆ ಎಂದು ಹೇಳಿದರು.
ಕೆಸಿಸಿ ಸಾಲ ಪಡೆದ ಸದಸ್ಯರು ತಮ್ಮ ಸ್ವಾದೀನಕ್ಕೆ ಸೇರಿದ ಆರ್‌ಟಿಸಿಯಲ್ಲಿ ಜಂಟಿ ಹೆಸರುಗಳು ಇದ್ದರೆ ಅವುಗಳನ್ನು ತೆಗದು ಹಾಕಿಸಿ, ಸಿಂಗಲ್ ಆರ್‌ಟಿಸಿ ಯಾಗಿ ಪರಿವರ್ತನೆ ಮಾಡಿಕೊಂಡರೆ ಮಾತ್ರ ಕೆಸಿಸಿ ಸಾಲ ಪಡೆದುಕೊಳ್ಳಲು ಸುಲಭವಾಗುತ್ತದೆ ಎಂದು ಹೇಳಿದರು.
ಸಂಘದ ಸದಸ್ಯರಾದ ಕೆ.ಬಿ.ಚಂದ್ರಶೇಖರ್, ಕೆ.ಕೆ.ಕುಶ್ವಂತ್, ದೇವರಾಜ್, ಎಚ್.ಕೆ. ಪ್ರಸಿ, ಶುಂಠಿ ಕುಮಾರ್, ಕೆ.ಪಿ.ಕೊಮಾರಪ್ಪ, ಬಿ.ಎಂ.ಸುರೇಶ್ ಮತ್ತಿತರರು ಸಂಘದ ಅಭಿವೃದ್ದಿಯ ಬಗ್ಗೆ ಸುದೀರ್ಘ ಚರ್ಚೆ ಮಾಡಿದರು. ಸಂಘದ ನೂತನ ಕಟ್ಟಡದ ಮುಂದುವರಿದ ಕಾಮಗಾರಿಗೆ ಮಹಾಸಭೆ ಒಪ್ಪಿಗೆ ನೀಡಿತು.
ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ರೈತ ಸಂಘದ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಆಗುವ ಅನಾಹುತಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಕೊಡಗು ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನವನ್ನು ವಿರೋಧಿಸಿ ಸಭೆ ನಿರ್ಣಯಿಸಿತು.
ಸಭೆಯಲ್ಲಿ ಉಪಾಧ್ಯಕ್ಷೆ ಎಚ್.ಎಸ್.ನೇತ್ರಾವತಿ, ಎಚ್.ಆರ್.ಸುರೇಶ್, ಬಿ.ಪಿ.ಮೊಗಪ್ಪ. ಕೆ.ಕೆ.ಶಿವಪ್ರಕಾಶ್, ಹೆಗ್ಗುಳ ಹೂವಯ್ಯ, ಎ.ಎಸ್.ನವೀನ್ ಕುಮಾರ್, ಜಿ.ಎಸ್.ನಾಗರಾಜು, ಕೆ.ಜಿ.ದಿನೇಶ್, ಸುನಿತಾ ಚಂದ್ರಪ್ಪ, ಜಿ.ಈ.ಸುರೇಶ್, ಜಿ.ಬಿ.ಗಿರೀಶ್, ಕೆ.ಎಲ್.ರಕ್ಷಿತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್.ಕಿರಣ್ ಇದ್ದರು.