Kodagu

ಸೋಮವಾರಪೇಟೆ; ಆಟವಾಡಲು ತೆರಳಿದ್ದ ಎರಡು ವರ್ಷದ ಮಗು ಹೊಳೆಯಲ್ಲಿ ಮುಳುಗಿ ಸಾವು

admincoorgdaily

ಸೋಮವಾರಪೇಟೆ; ಆಟವಾಡಲು ತೆರಳಿದ್ದ ಎರಡು ವರ್ಷದ ಮಗು ಹೊಳೆಯಲ್ಲಿ ಮುಳುಗಿ ಸಾವು
ಸೋಮವಾರಪೇಟೆ;ಸಮೀಪದ ಬಗೂರು ಗ್ರಾಮದ ಚೋರನಹೊಳೆಯಲ್ಲಿ ಆಟವಾಡುತ್ತಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಎರಡೂವರೆ ವರ್ಷದ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಐಗೂರಿನ ಪೊನ್ನಚ್ಚನ ತೇಜ ಹಾಗೂ ಶಮಾ ದಂಪತಿ ಪುತ್ರ, ಎರಡೂವರೆ ವರ್ಷದ ಚಹತ್ ಮೃತಪಟ್ಟ ಮಗು.ಶನಿವಾರ ಸಂಜೆ ವೇಳೆಗೆ ಅವಳಿ ಸೋದರ ಮತ್ತು ಚಿಕ್ಕಪ್ಪನ ಮಗನೊಂದಿಗೆ ಮನೆಯ ಸಮೀಪದಲ್ಲಿಯೇ ಇರುವ ಚೋರನ ಹೊಳೆಗೆ ಆಟವಾಡಲೆಂದು ತೆರಳಿದ್ದ. ಈ ಸಂದರ್ಭ ಆಕಸ್ಮಿಕವಾಗಿ ನೀರಿಗೆ ಬಿದ್ದು ಮಗು ಸಾವನ್ನಪ್ಪಿದೆ.

ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದ ಹಿನ್ನೆಲೆ ಮಕ್ಕಳು ಆಟವಾಡಲು ತೆರಳುತ್ತಿದ್ದರು. ಆದರೆ ನಿನ್ನೆ ಸಂಜೆ ತಾಕೇರಿ, ಕೆರಗಂದೂರು ಭಾಗದಲ್ಲಿ ಭಾರೀ ಮಳೆಯಾದ ಹಿನ್ನೆಲೆ ಬಗೂರು ಚೋರನ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿತ್ತು. ಇದರ ಅರಿವಿಲ್ಲದೆ ಮಕ್ಕಳು ನೀರಿನಲ್ಲಿ ಆಟವಾಡುವ ಸಂದರ್ಭ ಆಕಸ್ಮಿಕವಾಗಿ ಚಹತ್ ಕಾಲು ಜಾರಿ ಬಿದ್ದಿದ್ದು, ಕ್ಷಣಾರ್ಧದಲ್ಲಿ ಇಹಲೋಕ ತ್ಯಜಿಸಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಮನೆಯವರು ನೀರಿನೊಳಗಿದ್ದ ಚಹತ್ ನನ್ನು ಮೇಲೆತ್ತಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಪರೀಕ್ಷಿಸಿದ ವೈದ್ಯರು, ಮಗು ಮೃತಪಟ್ಟಿರುವ ಬಗ್ಗೆ ಖಚಿತಪಡಿಸಿದ್ದಾರೆ. ಮಗುವಿನ ನಿಧನದಿಂದ ಪೋಷಕರು, ಕುಟುಂಬಸ್ಥರ ರೋಧನ ಮುಗಿಲುಮುಟ್ಟಿದ್ದು, ಗ್ರಾಮಸ್ಥರಲ್ಲೂ ಶೋಕ ಮಡುಗಟ್ಟಿದೆ.
ಮೃತ ಚಹತ್ ಪೋಷಕರೊಂದಿಗೆ ಓರ್ವ ಸಹೋದರ, ಈರ್ವರು ಸಹೋದರಿಯರನ್ನು ಅಗಲಿದ್ದಾನೆ.