ದಕ್ಷಿಣ ವಲಯ ಹಾಕಿ ವಿಜೇತ ತಂಡಗಳಿಗೆ ಕೊಡಗು ವಿದ್ಯಾಲಯದಲ್ಲಿ ಅದ್ಧೂರಿ ಸ್ವಾಗತ
admincoorgdaily

ಮಡಿಕೇರಿ ಸೆ.16 - : ದಕ್ಷಿಣ ವಲಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ವಿಜಯಪತಾಕೆ ಹಾರಿಸಿದ ಕೊಡಗು ವಿದ್ಯಾಲಯದ ಬಾಲಕಿಯರ ತಂಡ ಹಾಗೂ ದ್ವಿತೀಯ ಸ್ಥಾನ ಪಡೆದು ರನ್ನರ್ಸ್ ಆದ ಬಾಲಕರ ತಂಡಕ್ಕೆ ಶಾಲೆಯ ವತಿಯಿಂದ ಸಂಭ್ರಮದ ಸ್ವಾಗತ ನೀಡಲಾಯಿತು.
ಪ್ರಥಮ ಸ್ಥಾನ ಪಡೆದ ಬಾಲಕಿಯರ ತಂಡವು ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿರುವುದು ಶಾಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆಯ ಸಾಧನೆಯಾಗಿದೆ.
ಶಾಲಾ ಆವರಣಕ್ಕೆ ಆಗಮಿಸಿದ ವಿಜೇತ ಕ್ರೀಡಾಪಟುಗಳನ್ನು ಬ್ಯಾಂಡ್‌ನೊಂದಿಗೆ ಪ್ರಾಂಶುಪಾಲರು, ಆಡಳಿತ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿ–ವಿದ್ಯಾರ್ಥಿನಿಯರು, ಪೋಷಕರು ಹಾಗೂ ಹಾಕಿ ಕೋಚ್‌ಗಳು ಸ್ವಾಗತಿಸಿದರು. ದಕ್ಷಿಣ ವಲಯ ಪಂದ್ಯಾವಳಿಯಲ್ಲಿ ಗಳಿಸಿದ ಟ್ರೋಫಿಯನ್ನು ಕ್ರೀಡಾಪಟುಗಳು ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ ಅವರಿಗೆ ಹಸ್ತಾಂತರಿಸಿದರು.
ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿರುವ ಕೊಡಗು ವಿದ್ಯಾಲಯದ ಬಾಲಕಿಯರ ತಂಡವು ಅಮೃತಸರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ. ಈ ಮೂಲಕ ವಿದ್ಯಾರ್ಥಿನಿಯರು ರಾಷ್ಟ್ರೀಯ ಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಲಿರುವುದು ಶಾಲೆಗೆ ಮತ್ತೊಂದು ಹೆಮ್ಮೆ ಎನಿಸಿದೆ. ವಿದ್ಯಾರ್ಥಿಗಳ ನಿರಂತರ ಅಭ್ಯಾಸ, ಶಿಸ್ತು, ತಂಡಸ್ಫೂರ್ತಿ ಹಾಗೂ ಕೋಚ್‌ಗಳ ಸಮರ್ಪಿತ ತರಬೇತಿ ಮತ್ತು ಮಾರ್ಗದರ್ಶನದಿಂದ ಈ ಗಮನಾರ್ಹ ಸಾಧನೆ ಸಾಧ್ಯವಾಗಿದೆ ಎಂದು ಶಾಲಾ ಪ್ರಾಂಶುಪಾಲರಾದ ಕೆ.ಎಸ್ . ಸುಮಿತ್ರಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಪೋಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುವ ಬಾಲಕಿಯರ ತಂಡಕ್ಕೆ ಶುಭ ಹಾರೈಸಿ, ಮುಂದಿನ ಹಂತದಲ್ಲಿಯೂ ಉತ್ತಮ ಸಾಧನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಯನ್ನು ಬೆಳೆಸುವಲ್ಲಿ ಶಾಲಾ ಆಡಳಿತ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಕೋಚ್‌ಗಳ ಪ್ರಯತ್ನವನ್ನು ಪೋಷಕರು ಶ್ಲಾಘಿಸಿದರು.
ಈ ಸಂದರ್ಭ ಹಾಕಿ ಕೋಚ್‌ಗಳಾದ ದೀನಾ ಎಚ್.ಡಿ. ಹಾಗೂ ಪಾರ್ವತಿ ಕೆ.ಎ. ಅವರನ್ನು ಅಭಿನಂದಿಸಲಾಯಿತು.
ದಕ್ಷಿಣ ವಲಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ವಿಜೇತರಾದ ಎರಡೂ ತಂಡಗಳಿಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತ ಮುಖ್ಯಸ್ಥರಾದ ರವಿ ಪಿ., ಶಿಕ್ಷಕರು, ಕೋಚ್‌ಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿ, ಅಮೃತಸರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಬಾಲಕಿಯರ ತಂಡಕ್ಕೆ ಶುಭ ಹಾರೈಸಿದರು.