Kodagu

ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ; ಡಿ.01 ರಿಂದ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

admincoorgdaily

ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ; ಡಿ.01 ರಿಂದ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಮಡಿಕೇರಿ:-2027ರ ಜನವರಿ 1 ನ್ನು ಅರ್ಹತಾ ದಿನಾಂಕವಾಗಿಟ್ಟುಕೊಂಡು ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕೈಗೊಳ್ಳಲು ಭಾರತ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. 

ಕೊಡಗು ಜಿಲ್ಲೆಯ 208-ಮಡಿಕೇರಿ ಹಾಗೂ 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಡಿಸೆಂಬರ್ 1 ರಂದು ಪ್ರಕಟಿಸಲಾಗುತ್ತಿದ್ದು, ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಪರಿಶೀಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಕೋರಿದ್ದಾರೆ. 

ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಮತಗಟ್ಟೆಗಳ ತರ್ಕಬದ್ಧ ಮರುಹಂಚಿಕೆ ಪ್ರಕ್ರಿಯೆಯನ್ನು ನವೆಂಬರ್ 23 ರೊಳಗೆ ಪೂರ್ಣಗೊಳಿಸಲಾಗಿದೆ. ಡಿಸೆಂಬರ್ 1 ರಂದು ಸಮಗ್ರ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಡಿ.1 ರಿಂದ ಡಿ.31 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಸಲ್ಲಿಕೆಯಾದ ಅರ್ಜಿಗಳನ್ನು ಜನವರಿ 14, 2027 ರೊಳಗೆ ವಿಲೇವಾರಿ ಮಾಡಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು 2027 ರ ಜನವರಿ 20 ರಂದು ಪ್ರಕಟಿಸಲಾಗುತ್ತದೆ. 

ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಜಿಲ್ಲೆಯ ಎಲ್ಲಾ ಮತಗಟ್ಟೆಗಳು, ತಾಲ್ಲೂಕು ಕಚೇರಿಗಳು, ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗುತ್ತದೆ. ಅಲ್ಲದೇ ವೆಬ್‍ಸೈಟ್‍ಗಳಲ್ಲಿಯೂ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ.  

ಕರಡು ಮತದಾರರ ಪಟ್ಟಿ ಪ್ರಕಟವಾದ ಡಿ.1 ರಿಂದ ಡಿ.31 ರವರೆಗೆ ನಮೂನೆ-6, ನಮೂನೆ-7 ಹಾಗೂ ನಮೂನೆ-8 ರ ಮೂಲಕ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. 

2027 ರ ಜನವರಿ 1, ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ರಂದು 18 ವರ್ಷ ಪೂರ್ಣಗೊಳ್ಳುವ ಯುವಕ-ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನಮೂನೆ-6 ಸಲ್ಲಿಸಬಹುದಾಗಿದೆ. ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6ಎ ಸಲ್ಲಿಸಬಹುದು.
ಕರಡು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಮತದಾರರ ಹೆಸರುಗಳನ್ನು ತೆಗೆದುಹಾಕಲು ನಮೂನೆ-7 ಸಲ್ಲಿಸಬಹುದಾಗಿದೆ.

 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಥವಾ ಕ್ಷೇತ್ರದ ಹೊರಗೆ ನಿವಾಸ ಸ್ಥಳಾಂತರಿಸಲು, ಮತದಾರರ ಪಟ್ಟಿಯಲ್ಲಿನ ನಮೂದುಗಳನ್ನು ಸರಿಪಡಿಸಲು, ಮತದಾನ ಗುರುತಿನ ಚೀಟಿ (ಎಪಿಕ್) ಬದಲಾಯಿಸಲು ಹಾಗೂ ವಿಶೇಷ ಚೇತನ ಮತದಾರರನ್ನು ಗುರುತಿಸಲು ನಮೂನೆ-8 ಸಲ್ಲಿಸಬಹುದಾಗಿದೆ.
ನಮೂನೆ-6, 6ಎ, 7 ಹಾಗೂ 8ರ ಅರ್ಜಿಗಳನ್ನು ಭಾರತ ಚುನಾವಣಾ ಆಯೋಗ ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಮತದಾರರ ಸಹಾಯವಾಣಿ ಆಪ್ ವೋಟರ್ ಹೆಲ್ಫ್‍ಲೈನ್ ಆಪ್  ಮೂಲಕ ಆನ್‍ಲೈನ್‍ನಲ್ಲಿ ಸಲ್ಲಿಸಬಹುದಾಗಿದೆ.

ಮತಗಟ್ಟೆಗಳ ಪುನರ್ ವಿಂಗಡಣೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 1,200 ಕ್ಕಿಂತ ಹೆಚ್ಚು ಮತದಾರರು ಇರುವ ಮತಗಟ್ಟೆಗಳನ್ನು ತರ್ಕಬದ್ಧವಾಗಿ ಪುನರ್ ವಿಂಗಡಣೆ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಅದರಂತೆ ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲವು ಮತಗಟ್ಟೆಗಳನ್ನು ವಿಭಜಿಸಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

208-ಮಡಿಕೇರಿ ವಿಧಾನಸಭಾ ಕ್ಷೇತ್ರ: ಹರೇಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 42ರಲ್ಲಿ 1,202 ಮತದಾರರಿದ್ದು, ಇದನ್ನು 568 ಮತದಾರರಿರುವ ಮತಗಟ್ಟೆ 42 ಹಾಗೂ 634 ಮತದಾರರಿರುವ ಹಿಟ್ಲುಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 42ಎ ಎಂದು ವಿಭಜಿಸಲು ಪ್ರಸ್ತಾಪಿಸಲಾಗಿದೆ.

ಹೊಸತೋಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 119ರಲ್ಲಿ 1,203 ಮತದಾರರಿದ್ದು, ಇದನ್ನು 575 ಮತದಾರರಿರುವ 119 ಹಾಗೂ 628 ಮತದಾರರಿರುವ 119ಎ ಎಂದು ಪುನರ್ ವಿಂಗಡಣೆ ಮಾಡಲು ಉದ್ದೇಶಿಸಲಾಗಿದೆ.

ಕಡಗದಾಳು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 242ರಲ್ಲಿ 1,203 ಮತದಾರರಿದ್ದು, ಇದನ್ನು 453 ಮತದಾರರಿರುವ 242 ಹಾಗೂ 750 ಮತದಾರರಿರುವ 242ಎ ಎಂದು ವಿಭಜಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

209-ವಿರಾಜಪೇಟೆ ವಿಧಾನಸಭಾ ಕ್ಷೇತ್ರ: ಎಮ್ಮೆಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 73ರಲ್ಲಿ 1,231 ಮತದಾರರಿದ್ದು, 600 ಮತದಾರರಿರುವ ಮತಗಟ್ಟೆ 73 ಹಾಗೂ 631 ಮತದಾರರಿರುವ 73ಎ ಎಂದು ವಿಭಜಿಸಲು ಪ್ರಸ್ತಾವಿಸಲಾಗಿದೆ.

ಕಾಕೋಟುಪರಂಬು ಸರ್ಕಾರಿ ಮಧ್ಯಮ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 86ರಲ್ಲಿ 1,219 ಮತದಾರರಿದ್ದು, 631 ಮತದಾರರಿರುವ ಮತಗಟ್ಟೆ 86 ಹಾಗೂ 588 ಮತದಾರರಿರುವ 86ಎ ಎಂದು ಪುನರ್ ವಿಂಗಡಣೆ ಮಾಡಲು ಉದ್ದೇಶಿಸಲಾಗಿದೆ.

ಬಾಡಗ-ಬಾಣಂಗಾಲ ಮಹಿಲಾಪುರ ಅಂಗನವಾಡಿ ಕೇಂದ್ರದ ಮತಗಟ್ಟೆ ಸಂಖ್ಯೆ 121ರಲ್ಲಿ 1,210 ಮತದಾರರಿದ್ದು, 557 ಮತದಾರರಿರುವ ಮತಗಟ್ಟೆ 121 ಹಾಗೂ 653 ಮತದಾರರಿರುವ ಬಾಡಗ-ಮಾಲ್ದಾರೆ ಗಿರಿಜನ ಕಾಲೋನಿಯ ಅಂಗನವಾಡಿ ಕೇಂದ್ರದ ಮತಗಟ್ಟೆ 121ಎ ಎಂದು ವಿಭಜಿಸಲು ಪ್ರಸ್ತಾವಿಸಲಾಗಿದೆ.

ಮತದಾರರು ಮತಗಟ್ಟೆಗೆ ತೆರಳಲು ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ತೊಳೂರು ಶೆಟ್ಟಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 9ರ ವ್ಯಾಪ್ತಿಯ ಮತದಾರರ ಪ್ರದೇಶಗಳನ್ನು ವಿಭಜಿಸಿ ಹೊಸ ಮತಗಟ್ಟೆ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. 
ಹಾಲಿ ಮತಗಟ್ಟೆ ಸಂಖ್ಯೆ 9ರಲ್ಲಿ 1,156 ಮತದಾರರಿದ್ದು, ಇದನ್ನು ಎರಡು ಮತಗಟ್ಟೆಗಳಾಗಿ ವಿಭಜಿಸಲು ಉದ್ದೇಶಿಸಲಾಗಿದೆ. 

ತೊಳೂರು, ದೊಡ್ಡ ತೋಳೂರು, ಹರಪನಹಳ್ಳಿ, ಇನಕನಳ್ಳಿ, ವನಗೂರುಕೊಪ್ಪ, ಸಿಂಗನಹಳ್ಳಿ, ನಡ್ಲುಕೊಪ್ಪ, ದೊಡ್ಡಮನೆ ಕೊಪ್ಪ, ನಡ್ಲುಕೊಪ್ಪ-2, ಕರಡಿಕೊಪ್ಪ ಹಾಗೂ ಸುಭಾಷ್ ನಗರ ಪ್ರದೇಶಗಳನ್ನು 518 ಮತದಾರರೊಂದಿಗೆ ಹಾಲಿ ಮತಗಟ್ಟೆ ಸಂಖ್ಯೆ 9ರಲ್ಲಿ ಉಳಿಸಲು ಪ್ರಸ್ತಾವಿಸಲಾಗಿದೆ. 
ಹರಪನಹಳ್ಳಿ, ಸಿಂಗನಹಳ್ಳಿ, ದೊಡ್ಡಮನೆಕೊಪ್ಪ, ಊರೊಳಗಿನಕೊಪ್ಪ, ಅಂಬೇಡ್ಕರ್ ನಗರ-1 ಹಾಗೂ ಅಂಬೇಡ್ಕರ್ ನಗರ ಭಾಗ-2 ಪ್ರದೇಶಗಳ 638 ಮತದಾರರಿಗೆ ಅನುಕೂಲವಾಗುವಂತೆ ತೊಳೂರು ಶೆಟ್ಟಳ್ಳಿ ಅಂಗನವಾಡಿ ಕಟ್ಟಡದಲ್ಲಿ ಹೊಸ ಮತಗಟ್ಟೆ ಸಂಖ್ಯೆ 9ಎ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. 

ಮತದಾರರು ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಇತರ ಅಗತ್ಯ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.