Kodagu

ಬೆಟ್ಟದಳ್ಳಿ ಹಾಗೂ ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ವಿಶೇಷ ಗ್ರಾಮ ಸಭೆ

admincoorgdaily

ಬೆಟ್ಟದಳ್ಳಿ ಹಾಗೂ ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ವಿಶೇಷ ಗ್ರಾಮ ಸಭೆ
ಸೋಮವಾರಪೇಟೆ: ತಾಲೂಕಿನ ಬೆಟ್ಟದಳ್ಳಿ ಹಾಗು ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷ ಗ್ರಾಮ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಪ್ರಸ್ತಾಪವನ್ನು ತಿರಸ್ಕರಿಸಿ ನಿರ್ಣಯ ಕೈಗೊಳ್ಳಲಾಯಿತು.

ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷ ಗ್ರಾಮ ಸಭೆ ಬೆಟ್ಟದಳ್ಳಿ ಸಮುದಾಯ ಭವನದಲ್ಲಿ ಆಡಳಿತಾಧಿಕಾರಿ ಎ.ಬಿ. ನವೀನ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂದರ್ಭ ಕಸ್ತೂರಿ ರಂಗನ್ ವರದಿ ಜಾರಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ, ವರದಿ ಅನುಷ್ಠಾನವನ್ನು ತಿರಸ್ಕರಿಸುವಂತೆ ನಿರ್ಣಯ ಕೈಗೊಂಡರು.

ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಾರಳ್ಳಿ ಗ್ರಾಮವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಇದು ಜನವಸತಿ ಪ್ರದೇಶವಾಗಿದೆ. ವರದಿಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನಕ್ಕೆ ಬಿಡಬಾರದು ಎಂದು ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಹೇಳಿದರು.

1978ರಿಂದ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಜನರು ಇದೀಗ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಮಾಡಿಕೊಂಡಿರುವ ಭೂಮಿಯನ್ನು ಸೆಕ್ಷನ್-4, ಸಿ ಮತ್ತು ಡಿ, ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಯತ್ನಗಳು ನಡೆಯುತ್ತಿವೆ. ಕುಮಾರಳ್ಳಿ ಗ್ರಾಮವನ್ನು ಕಸ್ತೂರಿ ರಂಗನ್ ವ್ಯಾಪ್ತಿಗೆ ಒಳಪಡಿಸಿದರೆ ಏರ್ ಡಿಸ್ಟೆನ್ಸ್ನಲ್ಲಿ 10 ಕಿ.ಮೀ. ವ್ಯಾಪ್ತಿಯಲ್ಲಿ ವರದಿಯ ಪರಿಣಾಮ ಬೀರಲಿದೆ. ಈ ಹಿನ್ನೆಲೆ ಶಾಂತಳ್ಳಿ, ಯಡೂರು, ಸೋಮವಾರಪೇಟೆಯವರೆಗೂ ವ್ಯಾಪಿಸಲಿದೆ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಹೇಳಿದರು. 
ಈಗಿರುವ ಅರಣ್ಯದ ಗಡಿ ಭಾಗಕ್ಕೆ ಮಾತ್ರ ಕಸ್ತೂರಿ ರಂಗನ್ ವರದಿ ಅನುಷ್ಠಾನ ಆಗಬೇಕು. ವನ್ಯಪ್ರಾಣಿಗಳು ಅರಣ್ಯದೊಳಗೆ ಇರುವಂತೆ ಇಲಾಖೆ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆಯವರು ರೈತರ ಕಾಫಿ ತೋಟಕ್ಕೆ ಕಾಲಿಡಬಾರದು ಎಂದು ಅರುಣ್ ಕೊತ್ನಳ್ಳಿ ಹೇಳಿದರು.

ರೈತ ಸಂಘದ ಅಧ್ಯಕ್ಷ ದಿನೇಶ್ ಮಾತನಾಡಿ, ನಮ್ಮ ಪರವಾಗಿ ಯಾವುದೇ ಸರ್ಕಾರಗಳು ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಬೇಕು. ಯಾವ ರಾಜಕಾರಣಿಯೂ ಗ್ರಾಮದೊಳಗೆ ಕಾಲಿಡದಂತೆ ಮಾಡಬೇಕು ಎಂದರು.

ವಕೀಲ ಬಿ.ಜೆ. ದೀಪಕ್ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಅರಣ್ಯದೊಳಗೆ ಅನುಷ್ಠಾನ ಮಾಡಲು ನಮ್ಮ ಅಭ್ಯಂತರವಿಲ್ಲ. ಎಕೋ ಸೆನ್ಸಿಟಿವ್ ಜೋನ್‌ನನ್ನು ಶೂನ್ಯಕ್ಕೆ ಇಳಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ಕೆ.ಎಂ. ಲೋಕೇಶ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳು ವಿಶೇಷ ಕಾಳಜಿ ವಹಿಸಿ ಕಸ್ತೂರಿ ರಂಗನ್ ವರದಿ ವಿರೋಧಿಸುವ ನಿಟ್ಟಿನಲ್ಲಿ ವಿಶೇಷ ಅಧಿವೇಶನ ಕರೆದಿರುವುದು ಶ್ಲಾಘನೀಯ. ಸರ್ಕಾರ ರೈತರ ಪರವಾಗಿ ನಿಲ್ಲುವ ವಿಶ್ವಾಸವಿದೆ ಎಂದರು.

ನೋಡಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೋಹನ್ ಇದ್ದರು. ಡಿ.ಆರ್.ಎಫ್.ಓ. ರವಿಕಿರಣ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜು ಇದ್ದರು.