Kodagu

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಭಿಯಾನ: ಜಿಲ್ಲಾಧಿಕಾರಿ ಪರಿಶೀಲನೆ

admincoorgdaily

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಭಿಯಾನ: ಜಿಲ್ಲಾಧಿಕಾರಿ ಪರಿಶೀಲನೆ
ಮಡಿಕೇರಿ: ಮತದಾರರ ಪಟ್ಟಿಯನ್ನು ಮತ್ತಷ್ಟು ನಿಖರ ಹಾಗೂ ಪರಿಷ್ಕೃತಗೊಳಿಸುವ ಉದ್ದೇಶದಿಂದ ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನವು ಎರಡು ದಿನಗಳ ಕಾಲ ನಡೆಯಿತು.
 
      ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಸ್ ಜೆ ಸೋಮಶೇಖರ್ ಅವರು 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮೇಕೇರಿ, ತಾಳತ್ತ್ ಮನೆ, ಕಾಟಕೇರಿ ಹಾಗೂ ಕಡಗದಾಳು ಮತ್ತಿತರ ಗ್ರಾಮಗಳಲ್ಲಿರುವ ಮತಗಟ್ಟೆಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿ, ಮಾಹಿತಿ ಪಡೆದರು.

      ಅಭಿಯಾನದ ಅಂಗವಾಗಿ ಸೆಪ್ಟೆಂಬರ್ 19 ಮತ್ತು 20 ರಂದು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಚಟುವಟಿಕೆಯು ಚುನಾವಣಾ ಆಯೋಗದ ನಿರ್ದೇಶನದಂತೆ ಜರುಗಿತು.
        ಕೊಡಗು ಜಿಲ್ಲೆಯ ಅರ್ಹ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳುವಲ್ಲಿ ಎರಡು ದಿನಗಳ ಕಾಲ ವಿಶೇಷ ಅಭಿಯಾನ ಆಯೋಜಿಸಲಾಗಿತ್ತು ಎಂದು ಜಿಲ್ಲಾಧಿಕಾರಿ  ಅವರು ಮಾಹಿತಿ ನೀಡಿದರು.

ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ನಮೂನೆ–6, ಅನಿವಾಸಿ ಭಾರತೀಯರ ಮತದಾರರ ನೋಂದಣಿಗೆ ನಮೂನೆ–6ಎ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅಥವಾ ಆಕ್ಷೇಪಣೆ ಸಲ್ಲಿಸಲು ನಮೂನೆ–7 ಹಾಗೂ ಮತದಾರರ ಪಟ್ಟಿಯಲ್ಲಿನ ವಿವರಗಳ ತಿದ್ದುಪಡಿ, ವಿಳಾಸ ಬದಲಾವಣೆ, ಮತದಾರರ ಗುರುತಿನ ಚೀಟಿ ಸೇರಿದಂತೆ ವಿವಿಧ ಬದಲಾವಣೆಗಳಿಗೆ ನಮೂನೆ–8 ಬಳಸಲು ವಿಶೇಷ ಅಭಿಯಾನದಲ್ಲಿ ಅವಕಾಶ ಮಾಡಲಾಗಿತ್ತು ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಸೋಮಶೇಖರ್ ಅವರು ವಿವರಿಸಿದರು.

      ಹಾಗೆಯೇ ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಳ್ಳುವುದರ ಜೊತೆಗೆ, ಯಾವುದೇ ವ್ಯತ್ಯಾಸ ಇದ್ದಲ್ಲಿ ಅಗತ್ಯ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು ಎಂದರು.

ಮತದಾರರು ಮತದಾರರ ಸಹಾಯವಾಣಿ ಆ್ಯಪ್ ಹಾಗೂ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ voters.eci.gov.in ಮೂಲಕವೂ ಅಗತ್ಯ ಸೇವೆಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಅವರು  ತಿಳಿಸಿದರು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ ಎಂದು ಸೋಮಶೇಖರ್ ಅವರು ತಿಳಿಸಿದರು.