ಹಿರಿಯ ನಾಗರಿಕರಿಗೆ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ: ಹಿರಿಯ ನಾಗರಿಕರನ್ನು ಗೌರವ ಮತ್ತು ಪ್ರೀತಿಯಿಂದ ನೋಡಿಕೊಳ್ಳಿ: ಶುಭ
admincoorgdaily

ಮಡಿಕೇರಿ:-ಹಿರಿಯ ನಾಗರಿಕರನ್ನು ಗೌರವ ಹಾಗೂ ಸಂತೋಷದಿಂದ ನೋಡಿಕೊಳ್ಳುವುದು ಪ್ರತಿಯೊಂದು ಕುಟುಂಬದ ಜವಾಬ್ದಾರಿಯಾಗಿದೆ. ಹಿರಿಯರು ನೆಮ್ಮದಿಯಿಂದ ಇರುವ ಮನೆ ಹಾಗೂ ಸಮಾಜವೇ ನಿಜವಾದ ಸಮೃದ್ಧಿಯ ಸಂಕೇತ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಅಭಿಪ್ರಾಯಪಟ್ಟರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ನಗರದ ಗಾಂಧಿ ಮೈದಾನದಲ್ಲಿ ಶುಕ್ರವಾರ ನಡೆದ ವಿವಿಧ ಆಟೋಟ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಮಳೆಯೊಂದಿಗೆ ಉತ್ತಮ ಬೆಳೆ ದೊರೆಯಬೇಕಾದರೆ ಪ್ರಕೃತಿಯ ಕೃಪೆಯ ಜೊತೆಗೆ ನಮ್ಮ ಹಿರಿಯರ ಆಶೀರ್ವಾದವೂ ಅಗತ್ಯ. ಯಾವ ದೇಶದಲ್ಲಿ ಹಿರಿಯರು ನೆಮ್ಮದಿಯಿಂದ ಬದುಕುತ್ತಿದ್ದಾರೋ ಆ ದೇಶ ಸಮೃದ್ಧವಾಗಿರುತ್ತದೆ ಎಂಬ ಮಾತಿದೆ. ಅದೇ ರೀತಿ ಮನೆಯಲ್ಲಿರುವ ಉಪಕರಣಗಳು, ಸೌಲಭ್ಯಗಳು ಅಥವಾ ಹಣದ ಆಧಾರದ ಮೇಲೆ ಆ ಮನೆ ಶ್ರೀಮಂತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲಿರುವ ತಂದೆ-ತಾಯಿ ಸಂತೋಷವಾಗಿದ್ದಾರೆಯೇ, ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆಯೇ ಎಂಬುದೇ ನಿಜವಾದ ಶ್ರೀಮಂತಿಕೆಯ ಮಾನದಂಡವಾಗಿದೆ ಎಂದು ನುಡಿದರು.
ಯುವ ಜನರು ಈ ವಿಚಾರವನ್ನು ಅರಿತುಕೊಳ್ಳಬೇಕು. ಹಿರಿಯರ ಕಣ್ಣಿನಲ್ಲಿ ನೀರು ತರಿಸಬಾರದು. ಹಿರಿಯರಿಗೆ ನೋವು ನೀಡುವ ಮನೆ ಉದ್ಧಾರವಾಗುವುದಿಲ್ಲ ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದರು.
ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಿ, ಉತ್ತಮ ಉದ್ಯೋಗ ಪಡೆದು ವಿದೇಶಕ್ಕೆ ತೆರಳುವಂತೆ ಮಾಡುವುದು ಮಾತ್ರ ಪೆÇೀಷಕರ ಕರ್ತವ್ಯವಲ್ಲ. ವಯಸ್ಸಾದಾಗ ಅವರನ್ನು ಪ್ರೀತಿ, ಕಾಳಜಿ ಮತ್ತು ಗೌರವದಿಂದ ನೋಡಿಕೊಳ್ಳುವುದು ಕೂಡ ಮಕ್ಕಳ ಜವಾಬ್ದಾರಿಯಾಗಿದೆ ಎಂದರು.
ವಿದ್ಯಾಭ್ಯಾಸವು ವ್ಯಕ್ತಿಯಲ್ಲಿ ಅಹಂಕಾರ ಬೆಳೆಸಬಾರದು. ಕೆಲವೊಮ್ಮೆ ಕಡಿಮೆ ವಿದ್ಯಾಭ್ಯಾಸ ಪಡೆದವರೇ ತಂದೆ-ತಾಯಿಯನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುತ್ತಿರುವುದನ್ನು ಗಮನಿಸಿದ್ದೇನೆ. ಇದು ಸಮಾಜದಲ್ಲಿ ಚಿಂತನೆಗೆ ಕಾರಣವಾಗುವ ಸಂಗತಿ ಎಂದು ಅವರು ಹೇಳಿದರು.
ಸಂಪೂರ್ಣ ಸಮಾಜವನ್ನು ಬದಲಾಯಿಸುವುದು ಒಬ್ಬರಿಂದ ಸಾಧ್ಯವಿಲ್ಲ. ಆದರೆ ವೃದ್ಧಾಶ್ರಮದಲ್ಲಿರುವ ಹಿರಿಯರು ತಮ್ಮ ಪರಿಸ್ಥಿತಿಯ ಬಗ್ಗೆ ಬೇಸರಪಡುವ ಅಗತ್ಯವಿಲ್ಲ. ವೃದ್ಧಾಶ್ರಮದಲ್ಲಿಯೇ ಸ್ನೇಹಿತರು, ಪ್ರೀತಿ ಮತ್ತು ವಿಶ್ವಾಸದ ವಾತಾವರಣ ನಿರ್ಮಿಸಿಕೊಳ್ಳಬಹುದು. ಅದು ಹಾಸ್ಟೆಲ್ ಅಥವಾ ಕಾಲೇಜು ಜೀವನದ ಸ್ನೇಹದಂತೆಯೇ ಹೊಸ ಅನುಭವ ನೀಡಬಹುದು ಎಂದು ಅವರು ಹೇಳಿದರು.
ಹಿರಿಯರು ಇರುವ ಮನೆಯ ವಾತಾವರಣವನ್ನು ಜೈಲಿನಂತಾಗಿಸಿಕೊಂಡು ನೋವು ಅನುಭವಿಸುವ ಬದಲು, ತಮ್ಮ ಮನೋಭಾವವನ್ನು ಬದಲಿಸಿಕೊಂಡು ಸಂತೋಷದಿಂದ ಬದುಕಲು ಪ್ರಯತ್ನಿಸಬೇಕು. ಇಂದಿನ ತಂತ್ರಜ್ಞಾನವನ್ನು ಕೂಡ ಸಕಾರಾತ್ಮಕವಾಗಿ ಬಳಸಿಕೊಳ್ಳಬಹುದು. ಮೊಬೈಲ್ ಮತ್ತು ಇಂಟರ್‍ನೆಟ್ ಸಂಪೂರ್ಣ ಕೆಟ್ಟದ್ದಲ್ಲ. ವಯಸ್ಸಿಗೆ ಅನುಗುಣವಾಗಿ ಮಾರ್ಗದರ್ಶಿತ ಧ್ಯಾನ, ಯೋಗ ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳು ಲಭ್ಯವಿದ್ದು, ಅವುಗಳನ್ನು ಬಳಸಿಕೊಂಡು ಮಾನಸಿಕ ನೆಮ್ಮದಿ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ನ್ಯಾಯಾಧೀಶರು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಸುಮಂಗಲ ಜಿ.ಹಿರೇಮನಿ ಮಾತನಾಡಿ, ಹಿರಿಯ ನಾಗರಿಕರು ತಮ್ಮ ಜೀವನಾನುಭವ, ಜ್ಞಾನ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಹಂಚಿಕೊಳ್ಳುವ ಮೂಲಕ ಸಮಾಜಕ್ಕೆ ದಾರಿ ದೀಪವಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ಶೈಲಜಾ ಅವರು ಮಾತನಾಡಿ, ಜಿಲ್ಲಾ ಆಯುಷ್ ಇಲಾಖೆಯಿಂದ ಆರೋಗ್ಯ ತಪಾಸಣೆ ಕೈಗೊಂಡಿದ್ದು, ಹಿರಿಯ ನಾಗರಿಕರು ಆಯುಷ್ ಇಲಾಖೆಯ ಸೌಲಭ್ಯವನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಮುಖ್ಯಸ್ಥರಾದ ಪ್ರಭುಸ್ವಾಮಿ ಅವರು ಮಾತನಾಡಿ, ಹಿರಿಯರು ಕುಟುಂಬ ಹಾಗೂ ಸಮಾಜದ ಅಮೂಲ್ಯ ಆಸ್ತಿಯಾಗಿದ್ದಾರೆ. ಹಲವು ದಶಕಗಳ ಜೀವನಾನುಭವ ಹೊಂದಿರುವ ಅವರು ಯುವಜನರಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ, ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಹಿರಿಯ ನಾಗರಿಕರ ಆರೋಗ್ಯ, ಸುರಕ್ಷತೆ ಹಾಗೂ ಕಲ್ಯಾಣಕ್ಕೆ ಸರ್ಕಾರ ವಿವಿಧ ಯೋಜನೆ ಜಾರಿಗೊಳಿಸಿದ್ದು, ಅರ್ಹರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಹಿರಿಯರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ನೆರವು ಒದಗಿಸುವ ಮೂಲಕ ಸಮಾಜದಲ್ಲಿ ಅವರಿಗೆ ಆತ್ಮವಿಶ್ವಾಸ ತುಂಬಬೇಕು ಎಂದು ತಿಳಿಸಿದರು.
ಹಿರಿಯ ನಾಗರಿಕರು ತಮ್ಮ ಪ್ರತಿಭೆ ಮತ್ತು ಅನುಭವಗಳನ್ನು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಕ್ರಿಯ ಜೀವನ ನಡೆಸಬೇಕು. ಯುವಜನರು ಹಿರಿಯರ ಅನುಭವದಿಂದ ಕಲಿತು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಅ.1 ರಂದು ನಡೆಯಲಿರುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಹಬ್ಬದಂತೆ ಆಚರಿಸುವಂತಾಗಬೇಕು ಎಂದು ಹೇಳಿದರು.
ಹಿರಿಯ ನಾಗರಿಕರು ಯಾವುದೇ ಸಮಸ್ಯೆ ಎದುರಾದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ 1090 ಸಂಖ್ಯೆಗೆ ಕರೆ ಮಾಡುವಂತೆ ಇದೇ ಸಂದರ್ಭ ತಿಳಿಸಿದರು.
ವಿರಾಜಪೇಟೆ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷರಾದ ಶಂಕರಿ ಪೆÇನ್ನಪ್ಪ ಅವರು ಮಾತನಾಡಿ, ಹಿರಿಯ ನಾಗರಿಕರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಸೌಲಭ್ಯ ಹಾಗೂ ಸಹಕಾರವನ್ನು ಅಧಿಕಾರಿಗಳು ಒದಗಿಸಬೇಕು ಎಂದು ಹೇಳಿದರು.
ಆಟೋಟ ಸ್ಪರ್ಧೆಯನ್ನು ಉಪ ವಿಭಾಗಧಿಕಾರಿ ನಿತಿನ್ ಚಕ್ಕಿ ಅವರು ಉದ್ಘಾಟಿಸಿ, ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರೂಪಣಾಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಆರ್.ಪ್ರಸನ್ನ ಕುಮಾರ್, ಮಡಿಕೇರಿ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ತಿಮ್ಮಯ್ಯ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಾದಮ್ಮಯ್ಯ, ಎಂ.ಎಸ್.ಸುಬ್ರಮಣಿ, ಪ್ರಭುಸ್ವಾಮಿ, ಮಾದೇವ ಸ್ವಾಮಿ, ಆಯುಷ್ ಇಲಾಖೆ ಸಿಬ್ಬಂದಿಗಳು, ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.
ಹಿರಿಯ ನಾಗರಿಕರಾದ ಹೆಚ್.ಆರ್.ಸುಂದರಮ್ಮ ಪ್ರಾರ್ಥಿಸಿದರು. ಮಾಹಿತಿ ಸಲಹೆಗಾರರಾದ ನವೀನ್ ನಿರೂಪಿಸಿದರು, ಜಿಲ್ಲಾ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಜಿ.ವಿಮಲಾ ವಂದಿಸಿದರು.
100 ಮೀಟರ್ ಓಟ, ವೇಗದ ನಡಿಗೆ, ಬಕೆಟ್ ಗೆ ಬಾಲ್ ಎಸೆಯುವ ಸ್ಪರ್ಧೆ, ಪಾಸಿಂಗ್ ದ ಬಾಲ್, ಗಾಯನ ಸ್ಪರ್ಧೆ, ಏಕಪಾತ್ರಾಭಿನಯ ಸೇರಿದಂತೆ ವಿವಿಧ ಆಟೋಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.