Kodagu

ಕೆಂಪೇಗೌಡ ಒಕ್ಕಲಿಗರ ಸಂಘದಿಂದ ಕ್ರೀಡಾಕೂಟ; ಹರಪಳ್ಳಿ ರವೀಂದ್ರರಿಂದ ಉದ್ಘಾಟನೆ

admincoorgdaily

ಕೆಂಪೇಗೌಡ ಒಕ್ಕಲಿಗರ ಸಂಘದಿಂದ ಕ್ರೀಡಾಕೂಟ; ಹರಪಳ್ಳಿ ರವೀಂದ್ರರಿಂದ ಉದ್ಘಾಟನೆ
ಶನಿವಾರಸಂತೆ: ಸ್ಥಳೀಯ ಕೆಂಪೇಗೌಡ ಒಕ್ಕಲಿಗರ ಸಂಘದ ವತಿಯಿಂದ ಮೊದಲನೇ ವರ್ಷದ ಒಕ್ಕಲಿಗರ ಕ್ರೀಡಾಕೂಟ ಸ್ಥಳೀಯ ಭಾರತಿ ವಿದ್ಯಾ ಸಂಸ್ಥೆ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಉದ್ಘಾಟಿಸಿ ಮಾತನಾಡಿ, ಒಕ್ಕಲಿಗ ಸಮಾಜದಲ್ಲಿ ಶ್ರೀಮಂತರು, ಬಡವರು ಎಲ್ಲರೂ ಇದ್ದಾರೆ. ಶ್ರೀಮಂತರು ಸಮಾಜ ಬಾಂಧವರನ್ನು ಸಂಘಟಿಸುವಲ್ಲಿ ಹಿಂದೆ ಉಳಿದಿದ್ದಾರೆ. ಮಧ್ಯಮ ವರ್ಗದವರು ಇಂದು ಸಮಾಜವನ್ನು ಒಗ್ಗೂಡಿಸುವಲ್ಲಿ ಮುಂದೆ ಬಂದಿರುವುದು ಹೆಮ್ಮೆಯ ಸಂಗತಿ. ಶನಿವಾರಸಂತೆ ಕೆಂಪೇಗೌಡ ಒಕ್ಕಲಿಗರ ಸಂಘವು ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ಮಾರ್ಗದರ್ಶಿಯಾಗಲಿ. ಇಂತಹ ಕ್ರೀಡಾಕೂಟದಿಂದ ಸಮಾಜ ಒಗ್ಗೂಡುತ್ತದೆ. ನಮ್ಮ ಸಮಾಜ ನಿಂತ ನೀರಾಗದೆ ಹರಿಯುವ ನೀರಾಗಬೇಕು ಎಂದರು.

ಕರ್ನಾಟಕ ರಾಜ್ಯ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಬೆಕ್ಕನಹಳ್ಳಿ ನಾಗರಾಜ್ ಮಾತನಾಡಿ, ಸಮಾಜ ಬಾಂಧವರಲ್ಲಿ ಒಗ್ಗಟ್ಟು ಕಡಿಮೆಯಾಗಿದೆ. ಎಲ್ಲರನ್ನು ಒಗ್ಗೂಡಿಸುವ ಕಾರ್ಯ ಶನಿವಾರಸಂತೆ ಒಕ್ಕಲಿಗರ ಸಂಘದಿಂದ ಆಗಬೇಕು. ಎಲ್ಲ ಕುಲಬಾಂಧವರು ಸಂಘದೊಂದಿಗೆ ಕೈಜೋಡಿಸಬೇಕು. ದ್ವೇಷ ರಾಜಕಾರಣ ಬಿಟ್ಟು ಸಮಾಜವನ್ನು ಕಟ್ಟಿ ಬೆಳೆಸುವವರಿಗೆ ಸಹಕರಿಸಬೇಕು ಎಂದರು.

ಸಂಘದ ಅಧ್ಯಕ್ಷ ಕೇಶವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಂಘ ಹೆಮ್ಮರವಾಗಿ ಬೆಳೆಯುವ ಯೋಜನೆ ರೂಪಿಸಲಾಗಿದ್ದು, ಭವ್ಯ ಕಟ್ಟಡ ನಿರ್ಮಾಣದ ಯೋಜನೆ ಇದೆ. ಸಮಾಜದ ಸರ್ವರ ಸಹಕಾರ ಅಗತ್ಯ. ಇದು ನಮ್ಮ ಸಂಘದ ಮೊದಲ ಕ್ರೀಡಾಕೂಟ, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ವೇದಿಕೆಯಲ್ಲಿ ಹಿರಿಯರಾದ ಕಳಲೆ ಕೃಷ್ಣೇಗೌಡ, ನಿವೃತ್ತ ಶಿಕ್ಷಕ ಗುಂಡೇಗೌಡ ಮುಂತಾದವರು ಇದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಸ್ವಾಗತಿಸಿ ವಂದಿಸಿದರು.